ನವದೆಹಲಿ: ಕೊರೊನಾ ಸೋಂಕು ಪಿಡುಗಿನ ಕಾರಣದಿಂದಾಗಿಸಿಂಧೂ ನದಿನೀರು ಹಂಚಿಕೆ ಒಪ್ಪಂದದಡಿ ಬಾಕಿ ಇರುವ ವಿಷಯಗಳನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ಚರ್ಚಿಸಲು ಭಾರತ ನೀಡಿರುವ ಸಲಹೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ.
ಸಭೆಯನ್ನು ವಾಘಾ ಗಡಿಯ ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲೇ ನಡೆಸಬೇಕು ಎಂದು ಪಾಕಿಸ್ತಾನ ಪಟ್ಟುಹಿಡಿದಿದೆ ಎಂದು ಮೂಲಗಳು ತಿಳಿಸಿವೆ. ‘ಪಿಡುಗಿನ ಕಾರಣದಿಂದಾಗಿ ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲಿ ಸಭೆ ಆಯೋಜಿಸುವುದು ಸೂಕ್ತವಲ್ಲ. ಭಾರತದಲ್ಲಿ ಪ್ರಸ್ತುತ ಇರುವ ಸನ್ನಿವೇಶದಡಿ ಭಾರತದ ನಿಯೋಗವು ಪಾಕಿಸ್ತಾನವು ಆಗ್ರಹಿಸಿದಂತೆ ನವದೆಹಲಿ ಅಥವಾ ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲಿ ಆಯೋಜಿಸುವ ಸಭೆಗೆ ಹಾಜರಾಗಲು ಸಾಧ್ಯವಿಲ್ಲ’ಎಂದು ಭಾರತದ ಸಿಂಧೂ ನದಿ ಆಯುಕ್ತರು ಕಳೆದ ವಾರ ಪಾಕಿಸ್ತಾನಕ್ಕೆ ಪತ್ರ ಬರೆದಿದ್ದಾರೆ.
ಪಾಕಿಸ್ತಾನದ ಮನವಿ ಮೇರೆಗೆ ನದಿ ನೀರು ಹಂಚಿಕೆ ಒಪ್ಪಂದದಡಿ ಬಾಕಿ ಇರುವ ವಿಷಯಗಳ ಕುರಿತು ಚರ್ಚಿಸಲು ಮಾರ್ಚ್ ಕೊನೆ ವಾರದಲ್ಲಿ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಪಿಡುಗಿನ ಕಾರಣ ಇದು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಇರುವ ಸ್ಥಿತಿಯಲ್ಲಿ ಅಂತರರಾಷ್ಟ್ರೀಯ ಪ್ರಯಾಣ ಪುನಃ ಯಥಾಸ್ಥಿತಿಗೆ ಬರಲು ಕಾಲಾವಕಾಶ ಬೇಕಾಗಿರುವುದರಿಂದ, ಸಭೆಯನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ನಡೆಸುವ ಕುರಿತು ಜುಲೈ ಮೊದಲ ವಾರದಲ್ಲಿ ಭಾರತದ ಆಯುಕ್ತರು ಪ್ರಸ್ತಾವ ಇರಿಸಿದ್ದರು. ಇದಕ್ಕೆ ಜುಲೈ ಕೊನೆ ವಾರದಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಆಯುಕ್ತರು ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲೇ ಸಭೆ ಆಯೋಜಿಸಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.