ಶ್ರೀನಗರ: ಕುಪ್ವಾರ ಜಿಲ್ಲೆಯಲ್ಲಿ ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಸೇನಾಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ವ್ಯಕ್ತಿಯಿಂದ ಎಕೆ-47 ಮತ್ತು ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ವೇಳೆ ಕುಪ್ವಾರ ಜಿಲ್ಲೆಯ ಕೇರಣ್ ಸೆಕ್ಟರ್‌ನಲ್ಲಿ ಜನವರಿ 1ರಂದು ನುಸುಳುಕೋರ ಅಥವಾ ಪಾಕ್ ಸೇನೆಯ ಗಡಿ ಕಾರ್ಯಪಡೆಯ (ಬಿಎಟಿ) ಸಿಬ್ಬಂದಿ ಕಾಶ್ಮೀರದೊಳಗೆ ನುಸುಳಲು ಪ್ರಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಕೈಗೊಂಡ ಸೇನೆಯು ನುಸುಳುಕೋರನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾರೆ.
ಹತ್ಯೆಗೊಳಗಾದವನನ್ನು ಮೊಹಮ್ಮದ್ ಶಬ್ಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಆತ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎನ್ನಲಾಗಿದೆ.
ಈ ಘಟನೆ ಪಾಕಿಸ್ತಾನ ಕಡೆಯ ವಿರೋಧಿ ಒಳನುಸುಳುವಿಕೆ ಅಡಚಣೆ ವ್ಯವಸ್ಥೆಯ ಬಳಿ ನಡೆದಿದ್ದು, ನುಸುಳುಕೋರರು ಅಥವಾ ಪಾಕಿಸ್ತಾನ ಸೇನೆಯಿಂದ ಎದುರಾಗುವ ಅಡೆತಡೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಕಣ್ಗಾವಲು ಹೆಚ್ಚಿಸಿದೆ.
ಶಸ್ತ್ರಸಜ್ಜಿತ ನುಸುಳುಕೋರ ಗಡಿ ನಿಯಂತ್ರಣ ರೇಖೆಯ ಬಳಿ ಮಧ್ಯಾಹ್ನ 3ಗಂಟೆ ಸುಮಾರಿಗೆ ನುಸುಳಲು ಪ್ರಯತ್ನಿಸುತ್ತಿರುವುದು ಸೇನೆಯ ಗಮನಕ್ಕೆ ಬಂದಿತ್ತು. ಈ ವೇಳೆ ಎಚ್ಚೆತ್ತ ಸೇನೆಯು ನುಸುಳುಕೋರನನ್ನು ಹೊಡೆದುರುಳಿಸಿದೆ. ಆತನ ಬಳಿ 7 ಗ್ರೆನೇಡ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.