ನವದೆಹಲಿ: ‘ದೇಶದಲ್ಲಿ ಕಳೆದ ಎರಡು–ಮೂರು ತಿಂಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕೆಮ್ಮು ಮತ್ತು ಜ್ವರಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣವಾಗಿದ್ದು, ಆ್ಯಂಟಿ ಬಯೋಟಿಕ್‌ಗಳನ್ನು ವಿವೇಚನೆಯಿಲ್ಲದೇ ಬಳಸಬಾರದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಜ್ಞರು ಹೇಳಿದ್ದಾರೆ.
ಕೆಮ್ಮು, ತೀವ್ರಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿರುವ ಐಸಿಎಂಆರ್ ತಜ್ಞರು, ವೈರಸ್‌ನಿಂದ ಹರಡುತ್ತಿರುವ ಈ ಕಾಯಿಲೆಗಳ ಲಕ್ಷಣಗಳ ಕುರಿತು ವೈರಸ್ ಸಂಶೋಧನೆ ಮತ್ತು ಡಯಾಗ್ನೊಸ್ಟಿಕ್ ಪ್ರಯೋಗಾಲಯ ಮೂಲಕ ನಿಗಾ ವಹಿಸಿರುವುದಾಗಿಯೂ ಹೇಳಿದ್ದಾರೆ.
ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮತ್ತು ಮಾಡಬಾರದ ಪಟ್ಟಿಯೊಂದನ್ನು ಸಹ ತಜ್ಞರು ಸೂಚಿಸಿದ್ದಾರೆ.
‘ಈ ಋತುವಿನಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಮೂರನೇ ದಿನದ ಬಳಿಕ ಜ್ವರದ ತೀವ್ರತೆಯು ಕಮ್ಮಿಯಾಗುತ್ತದೆ. ಆದರೆ, ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ (ಐಎಂಎ) ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿಸಮಿತಿಯು ಹೇಳಿದೆ.
ವಾಯುಮಾಲಿನ್ಯ ಕಾರಣ: ವಾಯುಮಾಲಿನ್ಯದ ಕಾರಣದಿಂದಾಗಿ ವೈರಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ 15 ವರ್ಷ ವಯಸ್ಸಿಗಿಂತ ಕೆಳಗಿನವರು ಹಾಗೂ 50 ವರ್ಷ ವಯಸ್ಸಿನ ಮೇಲ್ಪಟ್ಟವರಲ್ಲಿ ಜ್ವರದ ಜತೆಗೆ ಉಸಿರಾಟದ ಸೋಂಕು ಕಂಡುಬರುತ್ತಿದೆ ಎಂದೂ ಐಎಂಎ ತಿಳಿಸಿದೆ.
‘ರೋಗಿಗಳಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಆ್ಯಂಟಿಬಯೋಟಿಕ್‌ಗಳನ್ನು ನೀಡಬಾರದು’ ಎಂದೂ ವೈದ್ಯರಿಗೆ ಐಎಂಎ ಸೂಚಿಸಿದೆ.
‘ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಜನರು ಆಜಿಥ್ರೋಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮೊದಲಾದ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅದೂ ವೈದ್ಯರ ಸಲಹೆ ಇಲ್ಲದೇ ಸೇವಿಸುತ್ತಾರೆ. ಕಾಯಿಲೆಯಿಂದ ಸ್ವಲ್ಪ ನಿರಾಳವಾದ ಬಳಿಕ ಅವುಗಳ ಸೇವನೆಯನ್ನು ನಿಲ್ಲಿಸುತ್ತಾರೆ. ಇದು ಆ್ಯಂಟಿಬಯೋಟಿಕ್‌ಗಳ ಪ್ರತಿರೋಧಕತೆಗೆ ಕಾರಣವಾಗುತ್ತದೆ. ನಿಜವಾಗಿಯೂ ಆ್ಯಂಟಿ ಬಯೋಟಿಕ್‌ಗಳ ಅವಶ್ಯಕತೆ ಯಾವಾಗ ಇರುತ್ತದೆಯೋ ಆಗ ಅವುಗಳು ಕೆಲಸ ಮಾಡುವುದಿಲ್ಲ’ ಎಂದೂ ಐಎಂಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೋಂಕು ಹರಡದಂತೆ ಏನು ಮಾಡಬೇಕು, ಏನು ಮಾಡಬಾರದು
*ಕೈಗಳನ್ನು ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳಿ
ನಿಮಗೆ ಯಾವುದೇ ರೋಗಲಕ್ಷಣವಿದ್ದರೆ...
* ಮಾಸ್ಕ್ ಧರಿಸಿ, ಜನಸಂದಣಿ ಪ್ರದೇಶದಿಂದ ದೂರವಿರಿ
* ಕೆಮ್ಮುವಾಗ, ಸೀನುವಾಗ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ
* ದ್ರವ ಆಹಾರವನ್ನು ಹೆಚ್ಚು ಸೇವಿಸಿ
* ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ
* ಜ್ವರ ಮತ್ತು ಮೈಕೈ ನೋವಿದ್ದರೆ ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳಿ
ಏನು ಮಾಡಬಾರದು?
* ಯಾರೊಂದಿಗೂ ಹಸ್ತಲಾಘವ ಮಾಡದಿರಿ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ
* ವೈದ್ಯರ ಸಲಹೆ ಇಲ್ಲದೇ ಆ್ಯಂಟಿ ಬಯೋಟಿಕ್ ಮತ್ತು ಇತರ ಔಷಧಿಯನ್ನು ತೆಗೆದುಕೊಳ್ಳಬೇಡಿ
* ಇತರರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಬೇಡಿ
–––––––––––––––––––
ಆರೋಗ್ಯ ಸಂಶೋಧನಾ ಇಲಾಖೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.