ನಾಗಪುರ: ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ 'ಮಾಹಿತಿ ಭದ್ರತೆ'ಯು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, 'ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ಮಾಹಿತಿ ಭದ್ರತೆಯು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದು ನಮ್ಮ ಆರ್ಥಿಕತೆಗೆ ಬಲವಾದ ಆಘಾತವನ್ನು ನೀಡಬಲ್ಲದು' ಎಂದು ತಿಳಿಸಿದ್ದಾರೆ.
'ರಾಷ್ಟ್ರೀಯ ಭದ್ರತೆಯು ಸಶಸ್ತ್ರ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಅದು ಇತರ ಆರು ಪ್ರಮುಖ ಅಡಿಪಾಯಗಳ ಮೇಲೆ ನಿಂತಿದೆ. ಸೈನ್ಯದ ಭದ್ರತೆ, ಆರ್ಥಿಕ ಭದ್ರತೆ, ಆರೋಗ್ಯ ಭದ್ರತೆ, ಆಹಾರ ಭದ್ರತೆ, ಇಂಧನ ಭದ್ರತೆ ಮತ್ತು ಪರಿಸರ ಭದ್ರತೆಗಳನ್ನು ಹೊಂದಲು ಇಡೀ ರಾಷ್ಟ್ರದ ಶ್ರಮ ಬೇಕು' ಎಂದು ನರವಣೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಸೈಬರ್ ಯುದ್ಧವು ಸಾಂಪ್ರದಾಯಿಕವಲ್ಲದ ಬೆದರಿಕೆಗಳಲ್ಲಿ ಒಂದಾಗಿದೆ. ಇದು ನಮ್ಮ ಮಾಹಿತಿ ವ್ಯವಸ್ಥೆಗೆ ಮಾತ್ರ ಬೆದರಿಕೆಯಲ್ಲ. ಇದರಿಂದ ನಮ್ಮ ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳೂ ಸೋರಿಕೆಯಾಗುವ ಅಪಾಯವೂ ಇದೆ' ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.