ADVERTISEMENT

ಕಾಶ್ಮೀರದಲ್ಲಿನ ಹತ್ಯೆಗಳನ್ನು ರಾಜಕೀಯಗೊಳಿಸುತ್ತಿರುವ ಕೇಜ್ರಿವಾಲ್: ಠಾಕೂರ್ ಟೀಕೆ

ಪಿಟಿಐ
Published 6 ಜೂನ್ 2022, 3:35 IST
Last Updated 6 ಜೂನ್ 2022, 3:35 IST
ಅನುರಾಗ್ ಠಾಕೂರ್ - ಪಿಟಿಐ ಚಿತ್ರ
ಅನುರಾಗ್ ಠಾಕೂರ್ - ಪಿಟಿಐ ಚಿತ್ರ   

ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಕೀಯಗೊಳಿಸುತ್ತಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ದೂರಿದ್ದಾರೆ.

‘ಭಯೋತ್ಪಾದನೆ ಕೃತ್ಯಗಳನ್ನು ಖಂಡಿಸಬೇಕಾದ ಹಾಗೂ ಇಡೀ ದೇಶವೇ ಜಮ್ಮು ಮತ್ತು ಕಾಶ್ಮೀರದ ಜನರ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಈ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಪ್ರತ್ಯೇಕತಾವಾದಿಗಳನ್ನು ಖಂಡಿಸಿ ಒಂದೇ ಒಂದು ಹೇಳಿಕೆ ನೀಡಿಲ್ಲ’ ಎಂದು ಠಾಕೂರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರಶ್ನಿಸುವವರು ದೇಶ ವಿರೋಧಿ ಖಾಲಿಸ್ತಾನಿ ಪಡೆಗಳ ಜತೆ ಅಧಿಕಾರಕ್ಕಾಗಿ ಕೈಜೋಡಿಸಿದ್ದಾರೆ. ಇವರು ಯಾವ ಮುಖದಿಂದ ಭಯೋತ್ಪಾದನೆಯನ್ನು ಖಂಡಿಸಲಿದ್ದಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ಸರ್ವಾಂಗೀಣ ಅಭಿವೃದ್ಧಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಕೃತ್ಯಗಳು ದುರದೃಷ್ಟಕರ. ಬಿಜೆಪಿಗೆ ನಿಮ್ಮ (ಕೇಜ್ರಿವಾಲ್) ಪ್ರಮಾಣಪತ್ರ ಬೇಕಾಗಿಲ್ಲ. ನೀವು ಮೊದಲು ಭ್ರಷ್ಟ ಸಚಿವರನ್ನು ವಜಾಗೊಳಿಸಿ’ ಎಂದು ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ‘ಜನ ಆಕ್ರೋಶ ರ್‍ಯಾಲಿ’ ನಡೆಸಿತ್ತು. ಇದರಲ್ಲಿ ಭಾಗವಹಿಸಿ ಮಾತನಾಡಿದ್ದ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಅನುರಾಗ್ ಠಾಕೂರ್ ತಿರುಗೇಟು ನೀಡಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಭಾನುವಾರದ ರ್‍ಯಾಲಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ‘ಕಾಶ್ಮೀರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕಾಶ್ಮೀರಿ ಪಂಡಿತರನ್ನು ಗುರಿ ಮಾಡಿ ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಇದರಿಂದ ಪಂಡಿತರು ಅನಿವಾರ್ಯವಾಗಿ ಕಣಿವೆ ತೊರೆಯುವಂತಾಗಿದೆ. ಪಂಡಿತರ ಹತ್ಯೆ ತಡೆಯಲು ಕೇಂದ್ರ ಸರ್ಕಾರವು ಕ್ರಿಯಾ ಯೋಜನೆ ರೂಪಿಸಬೇಕು. ಬಿಜೆಪಿಗೆ ಕೊಳಕು ರಾಜಕೀಯ ಮಾಡುವುದು ಮಾತ್ರ ಗೊತ್ತು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.