ADVERTISEMENT

‘ಅಕ್ರಮ’ ಕೋಚಿಂಗ್‌ ಸೆಂಟರ್‌; ಪಾಲಿಕೆ ನಿರ್ಲಕ್ಷ್ಯದ ಚರ್ಚೆ

ಪಿಟಿಐ
Published 29 ಜುಲೈ 2024, 23:54 IST
Last Updated 29 ಜುಲೈ 2024, 23:54 IST
<div class="paragraphs"><p>ದೆಹಲಿಯಲ್ಲಿ ಮಳೆನೀರು ಕಾಲುವೆ ಮೇಲೆ ನಿರ್ಮಿಸಲಾಗಿದ್ದ ಕೋಚಿಂಗ್‌ ಸೆಂಟರ್‌ಗಳನ್ನು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದರು </p></div>

ದೆಹಲಿಯಲ್ಲಿ ಮಳೆನೀರು ಕಾಲುವೆ ಮೇಲೆ ನಿರ್ಮಿಸಲಾಗಿದ್ದ ಕೋಚಿಂಗ್‌ ಸೆಂಟರ್‌ಗಳನ್ನು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದರು

   

 –ಪಿಟಿಐ ಚಿತ್ರ

ನವದೆಹಲಿ: ಐಎಎಸ್‌ ಆಗುವ ಕನಸು ಹೊತ್ತು ದೆಹಲಿಗೆ ತೆರಳುವ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ನಿರ್ಲಕ್ಷ್ಯ ಧೋರಣೆ ಕುರಿತೂ ಚರ್ಚೆ ನಡೆಯುತ್ತಿದೆ. ಮೂವರು ಐಎಎಸ್‌ ಆಕಾಂಕ್ಷಿಗಳ ಸಾವು, ದೆಹಲಿಯ ಕೋ‌ಚಿಂಗ್‌ ಸೆಂಟರ್‌ಗಳ ‘ಅಕ್ರಮ’ಗಳನ್ನು ತೆರೆದಿಟ್ಟಿದೆ.

ADVERTISEMENT

ಎರಡು ದಿನಗಳ ಹಿಂದೆ ನಡೆದ ಘಟನೆಯ ಕುರಿತು ಎಂಸಿಡಿ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸಾವಿಗೆ ಕಾರಣಗಳನ್ನು ಅವಲೋಕಿಸಲಾಗುತ್ತಿದೆ.

ಮೂವರು ಆಕಾಂಕ್ಷಿಗಳ ಸಾವಿಗೆ ಎರಡು ಮುಖ್ಯ ಕಾರಣಗಳನ್ನು ಪೊಲೀಸರು ಹಾಗೂ ಎಂಸಿಡಿ ಗುರುತಿಸಿದೆ. ‘ಕಟ್ಟಡದ ಬಾಗಿಲು ಮುರಿಯುವಂತೆ ವ್ಯಕ್ತಿ
ಯೊಬ್ಬರು ಕಾರು ಚಲಾಯಿಸಿದ್ದಾರೆ. ಇದರಿಂದಾಗಿ ನೆಲಮಾಳಿಗೆಗೆ ನೀರು ನುಗ್ಗುವಂತಾಯಿತು. ಕಾರು ಚಲಾಯಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಡಿಸಿಪಿ ಎಂ. ಹರ್ಷವರ್ಧನ್‌ ಹೇಳಿದ್ದಾರೆ. ‘ಬಂಧಿತರ ಮೇಲೆ ‘ಕೊಲೆಯಲ್ಲದ, ಅಜಾಗರೂಕತೆಯಿಂದ ಸಂಭವಿಸಿದ ಸಾವು’ ಎಂಬ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ವನ್ನೂ ದಾಖಲಿಸಲಾಗಿದೆ’ ಎಂದರು.

‘ಕಟ್ಟಡ ಸುರಕ್ಷತೆಯ ಕುರಿತು ಸಂಸ್ಥೆಯ ಮಾಲೀಕ ಸಾಕಷ್ಟು ನಿರ್ಲಕ್ಷ್ಯ ತೋರಿದ್ದಾರೆ. ತರಬೇತಿ ನೀಡುತ್ತಿದ್ದ ಕೊಠಡಿಯ ಪ್ರವೇಶ ಹಾಗೂ ನಿರ್ಗಮನಕ್ಕೆ ಒಂದೇ ಬಾಗಿಲಿದೆ ಮತ್ತು ಇದಕ್ಕೆ ಬಯೊಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದಿಢೀರ್‌ ಎಂಬಂತೆ ನೀರು ನುಗ್ಗಿದ್ದರಿಂದ, ಈ ಯಂತ್ರವು ಕೆಟ್ಟು ನಿಂತಿತು. ಇದರಿಂದ ಮೂವರು ಅಲ್ಲಿಯೇ ಉಳಿಯುವಂತಾಯಿತು’ ಎಂದು ಎಂಸಿಡಿ ಅಧಿಕಾರಿಗಳು ಹೇಳಿದ್ದಾರೆ.

ಹಳೆಯ ರಾಜಿಂದರ್‌ ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 13 ಕೋಚಿಂಗ್‌ ಸೆಂಟರ್‌ಗಳನ್ನು ಎಂಸಿಡಿ ಅಧಿಕಾರಿಗಳು ಮುಚ್ಚಿಸಿದ್ದಾರೆ. ‘ಅಧಿಕಾರಿಗಳ ತಂಡವೊಂದು ಕೇಂದ್ರ ದೆಹಲಿಯಲ್ಲಿರುವ ಕೋಚಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಲಿದೆ’ ಎಂದು ದೆಹಲಿ ಸರ್ಕಾರವು ಭಾನುವಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಘೋಷಣೆ: ಸ್ಥಳದಿಂದ ತೆರಳಿದ ಎಲ್‌ಜಿ

ಐಎಎಸ್‌ ಆಕಾಂಕ್ಷಿಗಳು ತಮ್ಮ ಪ್ರತಿಭಟನೆಯನ್ನು ಸೋಮವಾರವೂ
ಮುಂದುವರಿಸಿದ್ದಾರೆ. ಈ ಕಾರಣದಿಂದಾಗಿ ಹಳೆಯ ರಾಜಿಂದರ್‌ ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಪ್ರತಿಭಟನೆ ನಿರತ ವಿದ್ಯಾರ್ಥಿಗಳನ್ನು ಸೋಮವಾರ ಭೇಟಿ ಮಾಡಿದರು. ಸಕ್ಸೇನಾ ಅವರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ, ‘ನಮಗೆ ನ್ಯಾಯ ಬೇಕು’ ಎಂದು ಆಕಾಂಕ್ಷಿಗಳು ಘೋಷಣೆಗಳನ್ನು ಕೂಗಿದರು. ‘ಪೊಲೀಸ್‌ ಬ್ಯಾರಿಕೇಡ್‌ಗಳ ಹಿಂದೆ ನಿಲ್ಲಬೇಡಿ. ನಮ್ಮ ಬಳಿ ಬಂದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ’ ಎಂದೂ ಆಕಾಂಕ್ಷಿಗಳು ಒತ್ತಾಯಿಸಿದರು. ಘೋಷಣೆಗಳ ಧ್ವನಿ ಹೆಚ್ಚಾಗತೊಡಗಿದಂತೆ ಸಕ್ಸೇನಾ ಅವರು ಆಕಾಂಕ್ಷಿಗಳೊಂದಿಗೆ ಸರಿಯಾಗಿ ಮಾತನಾಡ‌ದೆಯೇ ಅಲ್ಲಿಂದ ತೆರಳಿದರು. 

‘ಪ್ರಾಣಿಗಳಂತೆ ಬದುಕು’: ಸಿಜೆಐ‌ಗೆ ಪತ್ರ

‘ನಮ್ಮ ಆರೋಗ್ಯಕ್ಕೆ, ಸುರಕ್ಷತೆಗೆ ಖಾತರಿ ಇಲ್ಲದಂತಾಗಿದೆ. ದೆಹಲಿ ಸರ್ಕಾರ ಹಾಗೂ ಇಲ್ಲಿನ ಪಾಲಿಕೆಯು ವಿದ್ಯಾರ್ಥಿಗಳನ್ನು ಪ್ರಾಣಿಗಳ ರೀತಿಯಲ್ಲಿ ಬದುಕುವಂತೆ ಮಾಡಿವೆ. ಮೂವರು ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಿ ಹಾಗೂ ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸಿ’ ಎಂದು ಆಗ್ರಹಿಸಿ ಐಎಎಸ್‌ ಆಕಾಂಕ್ಷಿ, ಅವಿನಾಶ್‌ ದುಬೆ ಎಂಬವರು ಸುಪ್ರೀಂ ಕೋರ್ಟ್‌ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.