ADVERTISEMENT

ಹರಿಯಾಣ ಚುನಾವಣೆ: ಬಿಎಸ್‌ಪಿ– ಐಎನ್‌ಡಿಎಲ್‌ ಮೈತ್ರಿ

ಪಿಟಿಐ
Published 11 ಜುಲೈ 2024, 13:44 IST
Last Updated 11 ಜುಲೈ 2024, 13:44 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ಚಂಡೀಗಢ: ಈ ವರ್ಷದ ಅಂತ್ಯದಲ್ಲಿ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳವು (ಐಎನ್‌ಡಿಎಲ್‌) ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆ ಕೈ ಜೋಡಿಸಲಿದ್ದು ಮೈತ್ರಿ ಕುರಿತು ಎರಡೂ ಪಕ್ಷಗಳ ನಾಯಕರು ಗುರುವಾರ ಘೋಷಣೆ ಮಾಡಿದ್ದಾರೆ.

ಮೈತ್ರಿ ಪರವಾಗಿ, ಐಎನ್‌ಡಿಎಲ್‌ ನಾಯಕ ಅಭಯ್‌ ಚೌತಾಲಾ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ADVERTISEMENT

ಹರಿಯಾಣ ವಿಧಾನಸಭೆಯಲ್ಲಿನ 90 ಕ್ಷೇತ್ರಗಳ ಪೈಕಿ 37ರಲ್ಲಿ ಬಿಎಸ್‌ಪಿ ಮತ್ತು ಉಳಿದ ಕ್ಷೇತ್ರಗಳಲ್ಲಿ ಐಎನ್‌ಡಿಎಲ್‌ ಸ್ಪರ್ಧಿಸುವುದಕ್ಕೆ ಸಹಮತ ವ್ಯಕ್ತವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.

ಚಂಡೀಗಢದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌತಾಲಾ, ‘ಯಾವುದೇ ಸ್ವಾರ್ಥ ಹಿತಾಸಕ್ತಿ ಇಲ್ಲದೆ, ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಮಾಡಿಕೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಜಂಟಿಯಾಗಿ ಹೋರಾಡಲಿದ್ದೇವೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಮತ್ತು 10 ವರ್ಷಗಳ ಹಿಂದೆ ಲೂಟಿ ಮಾಡಿರುವ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರವಿಡುವುದು ಸಾಮಾನ್ಯ ಜನರ ಭಾವನೆಯಾಗಿದೆ’ ಎಂದರು.

ಚೌತಾಲಾ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಜತೆ ಇತ್ತೀಚೆಗೆ ಮೈತ್ರಿ ಕುರಿತು ಸಭೆ ನಡೆದಿತ್ತು ಎಂದು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್‌ ಆನಂದ್‌ ಹೇಳಿದರು.

ಮೈತ್ರಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ‘ಜನವಿರೋಧಿ ಪಕ್ಷಗಳನ್ನು ಸೋಲಿಸಲು ಬಿಎಸ್‌ಪಿ ಮತ್ತು ಐಎನ್‌ಎಲ್‌ಡಿ ಒಂದಾಗಿವೆ. ಅವು ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ಜತೆಯಾಗಿ ಕೆಲಸ ಮಾಡಲಿವೆ’ ಎಂದು ಹೇಳಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ ಐಎನ್‌ಎಲ್‌ಡಿಯ ಏಕೈಕ ಸದಸ್ಯರಾದ ಚೌತಾಲಾ ಇದ್ದಾರೆ. ಸದನದಲ್ಲಿ ಬಿಎಸ್‌ಪಿ ಯಾವುದೇ ಸದಸ್ಯರನ್ನು ಹೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.