ಸಂಬಲ್ಪುರ (ಒಡಿಶಾ): ನಿರ್ವಹಣಾ ಕ್ಷೇತ್ರದಲ್ಲಿ ಸಂಶೋಧನೆ, ಸಮಗ್ರತೆ ಮತ್ತು ಒಳಗೊಳ್ಳುವಿಕೆ ಎಂಬ ಮೂರು ಪ್ರಮುಖ ಮಂತ್ರಗಳಾಗಿ ಹೊರ ಹೊಮ್ಮುತ್ತಿದ್ದು, ಇವು ‘ಆತ್ಮನಿರ್ಭರ ಭಾರತ’ಅಭಿಯಾನ ಗುರಿ ಮುಟ್ಟಲು ನೆರವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಐಐಎಂ–ಸಂಬಲ್ಪುರ ಶಾಶ್ವತ ಕ್ಯಾಂಪಸ್‌ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ‘ನಿರ್ವಹಣಾ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಮತ್ತು ಪಾರದರ್ಶಕತೆಯಂತಹ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವ ಮೂಲಕ ‘ಸ್ವಾವಲಂಬಿ ಭಾರತ‘ದ ಗುರಿ ಸಾಧಿಸಬಹುದು’ಎಂದು ಹೇಳಿದರು.
‘ತಂತ್ರಜ್ಞಾನವು ಪ್ರದೇಶಗಳ ನಡುವಿನ ದೂರವನ್ನು ಕಡಿಮೆ ಮಾಡುತ್ತಿದೆ‘ ಎಂದು ಪ್ರತಿಪಾದಿಸಿದ ಮೋದಿ ಅವರು,ವಿಶ್ವದಾದ್ಯಂತ ನಡೆಯುತ್ತಿರುವ ಬದಲಾವಣೆಗಳನ್ನು ನಿಭಾಯಿಸಲು ಭಾರತ ಡಿಜಿಟಲ್ ಸಂಪರ್ಕ ಕ್ಷೇತ್ರದಲ್ಲಿ ತ್ವರಿತ ಸುಧಾರಣೆಗಳನ್ನು ತಂದಿದೆ’ಎಂದು ಪ್ರತಿಪಾದಿಸಿದರು.
‘ಮಾನವ ನಿರ್ವಹಣೆಯಷ್ಟೇ ತಾಂತ್ರಿಕವಾಗಿ ನಿರ್ವಹಣೆ ಮುಖ್ಯವಾಗಿದೆ’ಎಂದು ಅವರು ಹೇಳಿದರು. ಒಂದು ದಶಕದಲ್ಲಿ ದೇಶ ಗಣನೀಯವಾಗಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಇದು ಕೋವಿಡ್ 19 ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸಾಬೀತಾಗಿದೆ‘ ಎಂದು ಅಭಿಪ್ರಾಯಪಟ್ಟರು.
‘ಭಾರತದಲ್ಲಿರುವ ಇಂದಿನ ಸ್ಟಾರ್ಟ್ ಅಪ್‌ಗಳು ನಾಳಿನ ಬಹುರಾಷ್ಟ್ರೀಯ ಸಂಸ್ಥೆಗಳಾಗುತ್ತವೆ’ಎಂದು ಅವರು, ಯುವ ವ್ಯವಸ್ಥಾಪಕರು ತಮ್ಮ ವೃತ್ತಿಜೀವನದ ಗುರಿಗಳನ್ನು ದೇಶದ ಅಭಿವೃದ್ಧಿಗಾಗಿ ಸೇರಿಸುವಂತೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.