ADVERTISEMENT

ಐಎನ್‌ಎಸ್‌ ವಿಕ್ರಾಂತ್‌ ಸೇವೆಗೆ ನಿಯೋಜನೆ: ನೌಕಾಪಡೆ ಬಲ ಹೆಚ್ಚಳ

ದೇಶೀಯವಾಗಿ ನಿರ್ಮಿಸಿದ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:45 IST
Last Updated 2 ಸೆಪ್ಟೆಂಬರ್ 2022, 19:45 IST
ಐಎನ್‌ಎಸ್‌ ವಿಕ್ರಾಂತ್‌ನ ರನ್‌ವೇಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಕೈಬೀಸಿದರು
ಐಎನ್‌ಎಸ್‌ ವಿಕ್ರಾಂತ್‌ನ ರನ್‌ವೇಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಕೈಬೀಸಿದರು   

ಕೊಚ್ಚಿ (ಪಿಟಿಐ/ರಾಯಿಟರ್ಸ್‌): ದೇಶೀಯವಾಗಿ ನಿರ್ಮಿಸಲಾದ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ ‘ಐಎನ್‌ಎಸ್‌ ವಿಕ್ರಾಂತ್‌’ ಅನ್ನು ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಹಡಗುಕಟ್ಟೆಯಲ್ಲಿ ಶುಕ್ರವಾರ ನೌಕಾಪಡೆಯ ಸೇವೆಗೆ ನಿಯೋಜನೆ ಮಾಡಿದರು.

ಬೃಹತ್ ಯುದ್ಧವಿಮಾನ ವಾಹಕ ನೌಕೆ ನಿರ್ಮಾಣ ಸಾಮರ್ಥ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವು ಈ ಮೂಲಕ ಸೇರಿದೆ. ಜತೆಗೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಚೀನಾದ ಯುದ್ಧನೌಕೆಗಳನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕೆ ಲಭ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ಐಎನ್‌ಎಸ್‌ ವಿಕ್ರಾಂತ್‌’ ಸೇವೆಗೆ ನಿಯೋಜನೆಯಾಗಿರುವುದರಿಂದ ನೌಕಾಪಡೆಯ ಬಲ ಹೆಚ್ಚಿದೆ. ಮೂಲ ಐಎನ್‌ಎಸ್‌ ವಿಕ್ರಾಂತ್‌ ನೌಕೆಯನ್ನು ನಿವೃತ್ತಗೊಳಿಸಿದ್ದ ಕಾರಣ, ನೌಕಾಪಡೆಯಲ್ಲಿ ಯುದ್ಧವಿಮಾನ ವಾಹನ ನೌಕೆಯ ಸಂಖ್ಯೆ 1ಕ್ಕೆ ಇಳಿದಿತ್ತು. ಈಗ ಐಎನ್‌ಎಸ್‌ ವಿಕ್ರಮಾದಿತ್ಯ ಮಾತ್ರ ಸೇವೆಯಲ್ಲಿದ್ದು, ಐಎನ್‌ಎಸ್‌ ವಿಕ್ರಾಂತ್ ಅದಕ್ಕೆ ಜತೆಯಾಗಲಿದೆ.

ADVERTISEMENT

ಐಎನ್‌ಎಸ್‌ ವಿಕ್ರಾಂತ್ ನೌಕಾಪಡೆಯ ಸೇವೆಗೆ ನಿಯೋಜನೆಯಾಗಿದ್ದರೂ, ನೌಕೆಯು 2023ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಲಭ್ಯವಾಗಲಿದೆ. ಏಕೆಂದರೆ, ನೌಕೆಗೆ ಅಗತ್ಯವಿರುವಷ್ಟು ಯುದ್ಧವಿಮಾನಗಳು ಲಭ್ಯವಿಲ್ಲ. ಈಗ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯ ಕೆಲವು ಮಿಗ್‌–29 ಯುದ್ಧವಿಮಾನಗಳನ್ನು, ಐಎನ್‌ಎಸ್‌ ವಿಕ್ರಾಂತ್‌ಗೆ ನೀಡಲಾಗಿದೆ. ನೌಕೆಗೆ ಅಗತ್ಯವಿರುವಷ್ಟು ಯುದ್ಧವಿಮಾನಗಳು ಲಭ್ಯವಾದ ನಂತರವಷ್ಟೇ, ಯುದ್ಧವಿಮಾನ ಕಾರ್ಯಾಚರಣೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ನೌಕಾಪಡೆಯ ಮೂಲಗಳು ಹೇಳಿವೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಮೋದಿ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ:ಐಎನ್‌ಎಸ್‌ ವಿಕ್ರಾಂತ್ ಅನ್ನು ಸೇವೆಗೆ ನಿಯೋಜನೆ ಮಾಡಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಳೆದ ಎಂಟು ವರ್ಷಗಳಲ್ಲಿ, ರಕ್ಷಣಾ ಕ್ಷೇತ್ರದಲ್ಲಿ ಭಾರತವು ಆತ್ಮನಿರ್ಭರವಾಗಿದೆ. ರಕ್ಷಣಾ ವಲಯವನ್ನು ಸ್ವಾವಲಂಬಿ ಮಾಡುವಲ್ಲಿ ನಮ್ಮ ಸರ್ಕಾರದ ಒತ್ತಾಸೆಯನ್ನು ಐಎನ್‌ಎಸ್‌ ವಿಕ್ರಾಂತ್ ಪ್ರಚುರಪಡಿಸಿದೆ’ ಎಂದು ಹೇಳಿದರು. ಮೋದಿ ಅವರ ಈ ಮಾತಿಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ಈ ನೌಕೆಯ ನಿರ್ಮಾಣಕ್ಕೆ 22 ವರ್ಷಗಳು ತಗುಲಿವೆ. ಈ ಅವಧಿಯಲ್ಲಿ ಹಲವು ಸರ್ಕಾರಗಳು ಕಾರ್ಯನಿರ್ವಹಿಸಿವೆ. ಐಎನ್‌ಎಸ್‌ ವಿಕ್ರಾಂತ್ ನಿರ್ಮಾಣದಲ್ಲಿ ಎಲ್ಲಾ ಸರ್ಕಾರಗಳ ಕೊಡುಗೆಯೂ ಇದೆ. ಆದರೆ, ಮೋದಿ ತಾವೊಬ್ಬರೇ ಎಲ್ಲವನ್ನೂ ಮಾಡಿದ್ದೇವೆ ಎಂಬ ಹೆಗ್ಗಳಿಕೆ ತೋರುವ ಚಾಳಿ ಮುಂದುವರಿಸಿದ್ದಾರೆ’ ಎಂದು ಕಾಂಗ್ರೆಸ್‌ನ ನಾಯಕ ಜೈರಾಮ್ ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ನೌಕೆಯನ್ನು 2013ರಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಎಕೆ.ಆ್ಯಂಟನಿ ಲೋಕಾರ್ಪಣೆ ಮಾಡಿದ್ದರು’ ಎಂದಿರುವ ಜೈರಾಮ್ ರಮೇಶ್, ಲೋಕಾರ್ಪಣೆಯ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ನೌಕಾಪಡೆಗೆ ನೂತನ ಲಾಂಛನ, ಧ್ವಜ
ನೌಕಾಪಡೆಯ ನೂತನ ಲಾಂಛನ ಮತ್ತು ಧ್ವಜವನ್ನು ಪ್ರಧಾನಿ ಮೋದಿ ಅವರು ಶುಕ್ರವಾರ ಅನಾವರಣ ಮಾಡಿದರು.

ಈ ಹಿಂದೆ ಬಿಳಿ ಧ್ವಜದ ಮೇಲಿನ ಎಡತುದಿಯಲ್ಲಿ ಭಾರತದ ಧ್ವಜವಿದ್ದು, ಬ್ರಿಟಿಷ್‌ ಕ್ರಾಸ್‌ ಧ್ವಜದ ಮಧ್ಯಭಾಗದಲ್ಲಿತ್ತು. ಕ್ರಾಸ್‌ನ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವಿತ್ತು. ನೂತನ ಧ್ವಜದಲ್ಲಿ ಕ್ರಾಸ್‌ ಅನ್ನು ಕೈಬಿಡಲಾಗಿದೆ. ನೂತನವಾಗಿ ರೂಪಿಸಲಾಗಿರುವ ಲಾಂಛನವನ್ನು ಧ್ವಜದ ಬಲಭಾಗದಲ್ಲಿ ಇರಿಸಲಾಗಿದೆ.

ವಸಾಹತುಶಾಹಿಯ ಜೀತದ ಪ್ರತೀಕದಂತಿದ್ದ ಲಾಂಛನದ ಹೊರೆಯನ್ನು ಇಳಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

22 ವರ್ಷಗಳ ಶ್ರಮ
* 1957ರಲ್ಲಿ ಬ್ರಿಟನ್‌ನಿಂದ ಖರೀದಿಸಲಾಗಿದ್ದ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ ‘ಐಎನ್‌ಎಸ್‌ ವಿಕ್ರಾಂತ್‌’, 1990ರ ದಶಕದಲ್ಲೇ ಹಳತಾಗಿತ್ತು. ಹಾಗಾಗಿ ಅದನ್ನು ಸೇವೆಯಿಂದ ನಿವೃತ್ತಗೊಳಿಸಿ, ಬೇರೊಂದು ನೌಕೆಯನ್ನು ಸೇವೆಗೆ ನಿಯೋಜಿಸುವ ಪ್ರಸ್ತಾವವನ್ನು ರಕ್ಷಣಾ ಸಚಿವಾಲಯವು ಸಲ್ಲಿಸಿತ್ತು

* 1999ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ಯುದ್ಧವಿಮಾನ ವಾಹಕ ನೌಕೆಯನ್ನು ನಿರ್ಮಿಸಲು ಒಪ್ಪಿಗೆ ನೀಡಿತ್ತು. ಹೊಸ ನೌಕೆಗೂ ‘ಐಎನ್‌ಎಸ್‌ ವಿಕ್ರಾಂತ್‌’ ಎಂದೇ ಹೆಸರಿಡಲು ನಿರ್ಧರಿಸಲಾಯಿತು. 2002ರಲ್ಲಿ ‘ಐಎನ್‌ಎಸ್‌ ವಿಕ್ರಾಂತ್’ ನಿರ್ಮಾಣದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು

* 2005ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೊಚ್ಚಿಯ ಹಡಗುಕಟ್ಟೆಯಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು

* 2009ರಲ್ಲಿ ನೌಕೆಯ ನೆಲೆಗಟ್ಟು (ಕೀಲ್‌) ನಿರ್ಮಾಣ ಪೂರ್ಣ. 2011ರಲ್ಲಿ ನೌಕೆಯ ನಿರ್ಮಾಣ ಪೂರ್ಣವಾಯಿತು. ಆಗಲೇ ಅದರ ಪ್ರಾಥಮಿಕ ಪರೀಕ್ಷೆಗಳನ್ನು ಆರಂಭಿಸಲಾಯಿತು

* 2013ರಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ ಅವರು ‘ಐಎನ್‌ಎಸ್‌ ವಿಕ್ರಾಂತ್’ ಅನ್ನು ಲೋಕಾರ್ಪಣೆ ಮಾಡಿದ್ದರು. ನಂತರ ನೌಕೆಯನ್ನು ಎರಡನೇ ಹಂತದ ಪರೀಕ್ಷೆಗೆ ಕಳುಹಿಸಲಾಗಿತ್ತು

* 2020ರಲ್ಲಿ ನೌಕಾಪಡೆಯು ‘ಐಎನ್‌ಎಸ್‌ ವಿಕ್ರಾಂತ್‌’ ನೌಕೆಯನ್ನು ಸಾಗರದಲ್ಲಿನ ಕಾರ್ಯಾಚರಣೆ ಪರೀಕ್ಷೆಗೆ ಒಳಪಡಿಸಿತ್ತು

ದೇಶೀಯ ನಿರ್ಮಾಣ
ಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣದಲ್ಲಿ ದೇಶೀಯ ತಂತ್ರಜ್ಞಾನ, ಉಪಕರಣಗಳು ಮತ್ತು ಬಿಡಿಭಾಗಗಳನ್ನು ಬಳಸಲಾಗಿದೆ. ಈ ನೌಕೆಯು ಶೇ 76ರಷ್ಟು ದೇಶೀಯವಾದುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ನೌಕೆಯ ನಿರ್ಮಾಣದಲ್ಲಿ ಬಳಸಿರುವ ಉಕ್ಕು ಮತ್ತು ಕಬ್ಬಿಣದ ರಾಸಾಯನಿಕ ಸಂಯೋಜನೆಯು ವಿಶಿಷ್ಟವಾದುದು. ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ–ಡಿಆರ್‌ಡಿಒ’ ಈ ಉಕ್ಕು ಮತ್ತು ಕಬ್ಬಿಣವನ್ನು ಅಭಿವೃದ್ಧಿಪಡಿಸಿದೆ. ಡಿಆರ್‌ಡಿಒ ವಿನ್ಯಾಸದ ಉಕ್ಕು ಮತ್ತು ಕಬ್ಬಿಣವನ್ನು ಭಾರತೀಯ ಉಕ್ಕು ಪ್ರಾಧಿಕಾರವು ತಯಾರಿಸಿದೆ. ಈ ನೌಕೆಯಲ್ಲಿ ಬಳಸಿರುವ ಉಕ್ಕು ಮತ್ತು ಕಬ್ಬಿಣ ಸಂಪೂರ್ಣವಾಗಿ ದೇಶೀಯವಾದುದು.

ಏವಿಯಾನಿಕ್ಸ್‌, ರೇಡಾರ್ ಮತ್ತಿತ್ತರ ಉಪಕರಣಗಳನ್ನು ಬಿಇಎಲ್‌, ಎಚ್‌ಎಎಲ್‌ ಮತ್ತು ಬಿಎಚ್‌ಇಎಲ್‌ ಅಭಿವೃದ್ಧಿಪಡಿಸಿವೆ. ಎಂಜಿನ್‌ ಮತ್ತು ಗ್ಯಾಸ್‌ ಟರ್ಬೈನ್‌ಗಳನ್ನು ಖಾಸಗಿ ಕಂಪನಿಗಳಾದ ಟಾಟಾ ಪವರ್, ಲಾರ್ಸನ್‌ ಅಂಡ್‌ ಟುಬ್ರೊ ಪೂರೈಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.