ADVERTISEMENT

ಗುಜರಿ ಸೇರಲಿದೆ ‘ಐಎನ್‌ಎಸ್‌ ವಿರಾಟ್‌’

ಪಿಟಿಐ
Published 30 ಆಗಸ್ಟ್ 2020, 12:54 IST
Last Updated 30 ಆಗಸ್ಟ್ 2020, 12:54 IST
   

ದೆಹಲಿ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್‌ ಅನ್ನು ಮುಂದಿನ ತಿಂಗಳು ಮುಂಬೈನಿಂದ ಗುಜರಾತ್‌ನ ಭವನಗರಕ್ಕೆ ಕೊಂಡೊಯ್ದು ಕಳಚಿ, ಗುಜರಿಗೆ ಹಾಕಲಾಗುತ್ತಿದೆ.

ಐಎನ್‌ಎಸ್‌ ವಿರಾಟ್‌ ಜಗತ್ತಿನಲ್ಲೇ ದೀರ್ಘಾವಧಿಯ ಸೇವೆ ಸಲ್ಲಿಸಿದ ಯುದ್ಧ ನೌಕೆ. ಭಾರತಕ್ಕೆ ಮಾರಾಟವಾಗುವುದಕ್ಕೂ ಮೊದಲು 1959ರಿಂದ 1986ರ ವರೆಗೆ ಬ್ರಿಟನ್‌ನ ‘ರಾಯಲ್‌ ನೇವಿ’ಯಲ್ಲಿ ಅದು ಸೇವೆ ಸಲ್ಲಿಸಿತ್ತು. 1986ರಲ್ಲಿ ಭಾರತೀಯ ನೌಕಾಪಡೆಗೆ 65 ದಶಲಕ್ಷ ಡಾಲರ್‌ಗೆ ಮಾರಾಟವಾಗಿದ್ದ ವಿರಾಟ್‌, 1987ರಿಂದ ಸೇವೆ ಆರಂಭಿಸಿತ್ತು. 2017ರಲ್ಲಿ ನಿವೃತ್ತಿ ಹೊಂದಿತ್ತು. ಹೆಚ್ಚು ಕಡಿಮೆ 60 ವರ್ಷಗಳ ಕಾಲ ವಿರಾಟ್‌ ಬ್ರಿಟನ್‌ ಮತ್ತು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದೆ. ಅಲ್ಲದೆ, ಹಲವು ಮಹತ್ತರ ಕಾರ್ಯಾಚರಣೆಯಲ್ಲಿ, ಯುದ್ಧ–ಕಾಳಗಗಳಲ್ಲೂ ಭಾಗವಹಿಸಿದೆ.

ಯುದ್ಧ ವಿಮಾನಗಳ ವಾಹಕವಾಗಿರುವ ಬೃಹತ್‌ ಗಾತ್ರದ ‘ವಿರಾಟ್‌’ 2017ರಲ್ಲಿ ನಿವೃತ್ತಿಯಾದ ಬಳಿಕ ಅದನ್ನು ಕಳಚುವ ಉದ್ದೇಶಕ್ಕೆ ‘ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್’ ಕಳೆದ ತಿಂಗಳು ಹರಾಜು ನಡೆಸಿತ್ತು. ಈ ಹರಾಜಿನಲ್ಲಿ ಶ್ರೀರಾಮ್‌ ಗ್ರೂಪ್‌ ಎಂಬ ಸಂಸ್ಥೆ ₹38 ಕೋಟಿಗೆ ಖರೀದಿಸಿದೆ.

ADVERTISEMENT

ಭಾರತೀಯ ನೌಕದಳದ ಅಭಿಪ್ರಾಯ ಪಡೆದೇ ಐಎನ್‌ಎಸ್‌ ವಿರಾಟ್‌ ಅನ್ನು ಗುಜರಿಗೆ ಹಾಕುವ ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿಯೂ ಈ ಹಿಂದೆ ತಿಳಿಸಿತ್ತು.

ಭಾರತದಲ್ಲಿ ಗುಜರಿಗೆ ಸೇರುತ್ತಿರುವ ಎರಡನೇ ಯುದ್ಧ ನೌಕೆ ವಿರಾಟ್‌ ಆಗಿದೆ. ಇದಕ್ಕೂ ಮೊದಲು ಐಎನ್‌ಎ ವಿಕ್ರಾಂತ್‌ ಅನ್ನೂ ಕಳಚಿ ಗುಜರಿಗೆ ಹಾಕಲಾಗಿತ್ತು.

ಐಎನ್‌ಎಸ್‌ ವಿರಾಟ್‌ ರಾಯಲ್ ಬ್ರಿಟಿಷ್‌ನಲ್ಲಿ ಸೇವೆ ಸಲ್ಲಿಸುವ ವೇಳೆ, ಅರ್ಜೆಂಟೀನಾ ವಿರುದ್ಧ ನಡೆದ ಫಾಕ್ಲ್ಯಾಂಡ್‌ ಯುದ್ಧದಲ್ಲಿ ಭಾಗವಹಿಸಿತ್ತು. ಈ ಯುದ್ಧ ಗೆಲ್ಲುವಲ್ಲಿ ವಿರಾಟ್‌ ಗಮನಾರ್ಹ ನೆರವು ನೀಡಿತ್ತು.

ಬೈಕ್‌ಗಳಿಗೆ ಬಳಸಿಕೊಳ್ಳಬಹುದು

ಯುದ್ಧನೌಕೆಯ ಲೋಹವನ್ನು ಬೈಕ್‌ ತಯಾರಿಕೆಗೆ ಬಳಸಿಕೊಳ್ಳಲು ಅವಕಾಶವಿದೆ ಎಂದು ಐಎನ್‌ಎಸ್‌ ವಿರಾಟ್‌ ಅನ್ನು ಒಡೆಯುವ ಉಸ್ತುವಾರಿ ಹೊತ್ತಿರುವ ಶ್ರೀರಾಮ್‌ ಗ್ರೂಪ್ಸ್‌ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.