ADVERTISEMENT

ಮೂರು ರಾಜ್ಯಗಳಲ್ಲಿ ಕೋವಿಡ್‌ ಹೊಸ ತಳಿ ಜೆಎನ್‌.1ನ 21 ಪ್ರಕರಣಗಳು ಪತ್ತೆ

ಪಿಟಿಐ
Published 20 ಡಿಸೆಂಬರ್ 2023, 9:42 IST
Last Updated 20 ಡಿಸೆಂಬರ್ 2023, 9:42 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೆ ಕೋವಿಡ್‌–19ರ ಜೆಎನ್‌.1 ಉಪತಳಿಯ 21 ಪ್ರಕರಣಗಳು ಮೂರು ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪೌಲ್‌ ಬುಧವಾರ ಹೇಳಿದ್ದಾರೆ.

ಗೋವಾದಲ್ಲಿ 19 ಜನರಲ್ಲಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರಲ್ಲಿ ಜೆಎನ್‌.1 ಉಪತಳಿ ಪತ್ತೆಯಾಗಿದೆ. ಎರಡು ವಾರದಿಂದ ಕೋವಿಡ್‌–19ಕ್ಕೆ ದೇಶದಲ್ಲಿ 16 ಜನರು ಮೃತಪಟ್ಟಿದ್ದಾರೆ.

ADVERTISEMENT

ಹೊಸ ರೂಪಾಂತರ ತಳಿಯ ಕುರಿತು ಭಾರತೀಯ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದ ಅವರು, ರಾಜ್ಯಗಳು ಕೋವಿಡ್‌ ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸುವ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವರ ಪರಿಶೀಲನೆ: ದೇಶದ ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಬುಧವಾರ ಪರಿಶೀಲನೆ ನಡೆಸಿದರು. ಅಲ್ಲದೆ ಕೋವಿಡ್‌ನ ಹೊಸ ತಳಿಗಳ ಕುರಿತು ಎಚ್ಚರಿಕೆ ಮತ್ತು ನಿಗಾ ವಹಿಸಲು ಅವರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಸೂಚಿಸಿದರು.

ದೇಶದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದರೂ, ಶೇ 92.8ರಷ್ಟು ಜನರು ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದಾರೆ. ಇದು ಸೌಮ್ಯವಾದ ಅನಾರೋಗ್ಯವನ್ನು ತೋರುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ ಪಂತ್‌ ಹೇಳಿದರು.

614 ಪ್ರಕರಣಗಳು ಪತ್ತೆ: ದೇಶದಲ್ಲಿ ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 614 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇದು ಮೇ 21ರ ನಂತರ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಕರಣಗಳಾಗಿವೆ. ದೇಶದಲ್ಲಿ ಒಟ್ಟು 2,311 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಪಾಯಕಾರಿಯಲ್ಲ: ‘ಕೋವಿಡ್‌– 19ರ ರೂಪಾಂತರ ತಳಿಯಾದ ಜೆಎನ್‌. 1 ಅಪಾಯಕಾರಿಯಲ್ಲ. ಇದು  ಕಡಿಮೆ ಪ್ರಮಾಣದ ಅಪಾಯವನ್ನುಂಟು ಮಾಡುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.