ನವದೆಹಲಿ: ಹಾಲಿವುಡ್ ಸಿನಿಮಾ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ನಿಂದ ಪ್ರೇರಿತರಾಗಿ ಹೈಟೆಕ್ ಉಪಕರಣಗಳನ್ನು ಬಳಸಿಕೊಂಡು 40 ಐಷಾರಾಮಿ ಕಾರುಗಳು, ಸ್ಕ್ಯಾನರ್‌ಗಳು ಹಾಗೂ ಜಿಪಿಎಸ್ ಜಾಮರ್‌ಗಳನ್ನು ಕಳವು ಮಾಡಿದ ಮೂವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಉತ್ತಮ್ ನಗರದ ಮನೀಶ್ ರಾವ್, ಜಗದೀಪ್ ಶರ್ಮಾ ಹಾಗೂ ಉತ್ತರ ಪ್ರದೇಶದ ಮೀರತ್‌ನ ಆಸ್ ಮೊಹಮ್ಮದ್ ಬಂಧಿತರು.
ಕಳವು ಮಾಡಿದ ಕಾರು ಮಾರಾಟಕ್ಕೆ ವ್ಯವಹಾರ ಕುದುರಿಸಲು ಯತ್ನಿಸುತ್ತಿರುವಾಗ ರಾವ್ ಮತ್ತು ಶರ್ಮಾ ಅವರನ್ನು ಬಂಧಿಸಲಾಯಿತು. ಕಾರನ್ನು ಪಶ್ಚಿಮ ವಿಹಾರ ಪ್ರದೇಶದಿಂದ ಅವರು ಕಳವು ಮಾಡಿದ್ದರು ಎಂದು ದೆಹಲಿ ನೈಋತ್ಯ ವಿಭಾಗ ಡಿಸಿಪಿ ಮನೋಜ್ ಸಿ ತಿಳಿಸಿದ್ದಾರೆ.
ಬಂಧಿತರಿಂದ ಸೆನ್ಸರ್ ಕಿಟ್, ಮ್ಯಾಗ್ನೆಟ್, 8 ರಿಮೋಟ್ ಕಾರ್ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ಕಾರುಗಳನ್ನು ಮಾರಾಟ ಮಾಡುವಲ್ಲಿ ಮೊಹಮ್ಮದ್ ಪ್ರಮುಖ ಪಾತ್ರ ವಹಿಸುತ್ತಿದ್ದ. ರಾಜಸ್ಥಾನದಲ್ಲಿ ಕಾರುಗಳ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಆರೋಪಿಗಳು ಹಾಲಿವುಡ್ ಸಿನಿಮಾ ಫಾಸ್ಟ್ ಆ್ಯಂಡ್ ಫ್ಯೂರಿಯಸ್‌ನಿಂದ ಪ್ರೇರಣೆ ಪಡೆದಿದ್ದರು. ಸ್ಕ್ಯಾನರ್‌ಗಳನ್ನು ಬಳಸಿಕೊಂಡು ಕಾರುಗಳನ್ನು ಅನ್‌ಲಾಕ್ ಮಾಡುತ್ತಿದ್ದರು. ಜಾಮರ್‌ಗಳನ್ನು ಬಳಸಿಕೊಂಡು ಕಾರುಗಳಲ್ಲಿರುವ ಜಿಪಿಎಸ್ ಅನ್ನು ಡಿಸೇಬಲ್ ಮಾಡುತ್ತಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಈ ಮೂವರೂ ಕುಖ್ಯಾತ ‘ರವಿ ಉತ್ತಮ್‌ನಗರ ಗ್ಯಾಂಗ್’ನವರು ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಆರೋಪಿಗಳು ತಮ್ಮ ಗ್ಯಾಂಗ್ ನಾಯಕ ರವಿ ಜತೆ ಸೇರಿ ಏಪ್ರಿಲ್ ತಿಂಗಳಿಂದೀಚೆಗೆ ದೆಹಲಿಯ ವಿವಿಧ ಪ್ರದೇಶಗಳಿಂದ ಕಾರುಗಳ ಕಳವು ಮಾಡಿದ್ದಾರೆ.
ಕಳವು ಮಾಡಲು ಸಾಫ್ಟ್‌ವೇರ್ ಬಳಕೆ: ‘ಸಾಫ್ಟ್‌ವೇರ್ ಆಧಾರಿತ ಹ್ಯಾಕಿಂಗ್ ಸಾಧನ ಬಳಸಿಕೊಂಡು ಕಾರನ್ನು ಅನ್‌ಲಾಕ್ ಮಾಡುತ್ತಿದ್ದೆವು. ಈ ಸಾಧನದ ನೆರವಿನಿಂದ ಕಾರಿನ ಸಾಫ್ಟ್‌ವೇರ್ ಅನ್ನು ಫಾರ್ಮ್ಯಾಟ್ ಮಾಡಿ ಹೊಸ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುತ್ತಿದ್ದೆವು. 2ರಿಂದ 3 ನಿಮಿಷಗಳ ಒಳಗೆ ಕಾರು ಕಳವು ಮಾಡುತ್ತಿದ್ದೆವು’ ಎಂಬುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಕಳವು ಮಾಡಿದ ಕಾರುಗಳನ್ನು ನಗರದ ಹೊರ ವಲಯಗಳಲ್ಲಿ, ಆಸ್ಪತ್ರೆಗಳ ಆವಣದಲ್ಲಿ ಅಥವಾ ಸಿಸಿಟಿವಿ ಇಲ್ಲದ ಕಡೆ ಪಾರ್ಕ್ ಮಾಡುತ್ತಿದ್ದ ಆರೋಪಿಗಳು ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ಅಲ್ಲಿಂದ ಸಾಗಿಸುತ್ತಿದ್ದರು. ಎರಡು ಪಿಸ್ತೂಲುಗಳು, 5 ಲೈವ್ ಕ್ಯಾಟ್ರಿಡ್ಜ್‌ಗಳು, ಟೂಲ್ ಕಿಟ್‌ಗಳು ಹ್ಯಾಕಿಂಗ್ ಸಾಧನಗಳು, 30 ಕಾರುಗಳ ಕೀ ಹಾಗೂ ಕಳವು ಮಾಡಿದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.