ADVERTISEMENT

ಶಿಮ್ಲಾ: ಪೊಲೀಸರ ಈ ಕ್ರಮದಿಂದ ಸೇಬು ತುಂಬಿದ ವಾಹನಗಳ ಕಳ್ಳತನ ಗಮನಾರ್ಹ ಇಳಿಕೆ

ಹಿಮಾಚಲ ಪ್ರದೇಶದಲ್ಲಿ ಸೇಬು ಬೆಳೆ ವಹಿವಾಟು ವಾರ್ಷಿಕವಾಗಿ ಸುಮಾರು ₹ 5 ಸಾವಿರ ಕೋಟಿಗೂ ಅಧಿಕ

ಪಿಟಿಐ
Published 5 ಜನವರಿ 2024, 10:02 IST
Last Updated 5 ಜನವರಿ 2024, 10:02 IST
<div class="paragraphs"><p>ಸೇಬು</p></div>

ಸೇಬು

   

ಸಾಂದರ್ಭಿಕ ಚಿತ್ರ

ಶಿಮ್ಲಾ (ಹಿಮಾಚಲಪ್ರದೇಶ): ಸುಗ್ಗಿಯ ವೇಳೆ ನಡೆಯುತ್ತಿದ್ದ ಸೇಬು ತುಂಬಿದ ಟ್ರಕ್ ಹಾಗೂ ಇತರೆ ವಾಹನಗಳ ಕಳ್ಳತನ ಪ್ರಕರಣಗಳು ಹಿಮಾಚಲ ಪ್ರದೇಶ ಪೊಲೀಸರ ಕ್ರಮದಿಂದ ಗಮನಾರ್ಹವಾಗಿ ಇಳಿಕೆಯಾಗಿವೆ.

ADVERTISEMENT

ಶಿಮ್ಲಾ ಜಿಲ್ಲೆಯಲ್ಲಿ ಈ ಮೊದಲು ಸೇಬು ಸುಗ್ಗಿಯಲ್ಲಿ ವರ್ಷಕ್ಕೆ ಸರಾಸರಿ 25 ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಈಗ ಶಿಮ್ಲಾ ಜಿಲ್ಲಾ ಪೊಲೀಸರು ಸೇಬು ತುಂಬುವ ಸರಕು ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ (global positioning system) ಅಳವಡಿಸಲು ಕ್ರಮ ಕೈಗೊಂಡಿರುವುದರಿಂದ ಕಳ್ಳತನ ಪ್ರಕರಣಗಳು ಶೇ 95 ರಷ್ಟು ಕಡಿಮೆಯಾಗಿವೆ.

‘ಕಳೆದ ವರ್ಷ ಶಿಮ್ಲಾ ಜಿಲ್ಲೆಯಲ್ಲಿ ಸೇಬು ತುಂಬಿದ ವಾಹನ ಕಳ್ಳತನ ಪ್ರಕರಣ ಕೇವಲ 1 ದಾಖಲಾಗಿದೆ. ಕಳ್ಳತನಗೊಂಡ ವಾಹ‌ನ ಪತ್ತೆ ಹಚ್ಚಲು ಕಾರಣ ಜಿಪಿಎಸ್ ಅಳವಡಿಕೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ಸೇಬು ವ್ಯಾಪಕವಾಗಿ ಬೆಳೆಯುವ ಶಿಮ್ಲಾ ಜಿಲ್ಲೆಯಲ್ಲಿ ಸುಗ್ಗಿಯ ಸಂದರ್ಭ ಸೇಬು ತುಂಬಿದ ಸರಕು ವಾಹನಗಳ ಕಳ್ಳತನ ಪ್ರಕರಣಗಳು ತುಂಬಾ ನಡೆಯುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ‘ಆ್ಯಪಲ್ ಆನ್ ವೀಲ್ಸ್’ ಅಭಿಯಾನದಡಿ ಸೇಬು ಸಾಗಿಸುವ ವಾಹನಗಳಿಗೆಲ್ಲ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ಮಾಲೀಕರಿಗೆ ಆದೇಶಿಸಲಾಗಿತ್ತು. ಆ ನಂತರ ಕಳ್ಳತನ ಪ್ರಕರಗಳು ಗಣನೀಯವಾಗಿ ಕಡಿಮೆಯಾದವು. ಒಂದೇ ‍ಕಳ್ಳತನ ಪ್ರಕರಣ ಕಳೆದ ವರ್ಷ ದಾಖಲಾಗಿದ್ದು, ಆ ವಾಹನವನ್ನೂ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಗಾಂಧಿ ತಿಳಿಸಿದ್ದಾರೆ.

‘ಶಿಮ್ಲಾ ಜಿಲ್ಲೆಯಲ್ಲಿ 15,265 ಸರಕು ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇದರಿಂದ ಅಪಘಾತಗಳೂ ಕಡಿಮೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಸೇಬು ಬೆಳೆ ವಹಿವಾಟು ವಾರ್ಷಿಕವಾಗಿ ಸುಮಾರು ₹ 5 ಸಾವಿರ ಕೋಟಿಗೂ ಅಧಿಕ. 2022 ರಲ್ಲಿ ಸೇಬು ತುಂಬಿದ ವಾಹನಗಳ ಕಳ್ಳತನ ಪ್ರಕರಣಗಳು ನೂರರಷ್ಟು ದಾಖಲಾಗಿದ್ದವು.

ಸೇಬು ಸಾಗಣೆ ವಾಹನಗಳಿಂದ 2023 ರಲ್ಲಿ 83 ಅಪಘಾತಗಳು ಸಂಭವಿಸಿದ್ದವು. ಅದಲ್ಲಿ 33 ಜನ ಮೃತರಾಗಿ 132 ಜನ ಗಾಯಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಕೈಗೊಂಡಿರುವ ಕ್ರಮಗಳಿಂದ ಸೇಬು ಬೆಳೆಗಾರರು, ಮಧ್ಯವರ್ತಿಗಳು ಸಂತಸಗೊಂಡಿದ್ದಾರೆ ಎಂದು ಎಸ್‌ಪಿ ಗಾಂಧಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.