ಕೋಲ್ಕತಾ: ಸಿಪಿಐಎಂಗೆ ಸಿದ್ಧಾಂತವೇ ಇಲ್ಲ. ರೈಲ್ವೇ ಹಳಿಗಳ ಮೇಲೆ ಬಾಂಬ್ ಇರಿಸುವುದು 'ಗೂಂಡಾಗಿರಿ'. ಆಂದೋಲನದ ಹೆಸರಿನಲ್ಲಿ ಪ್ರಯಾಣಿಕರಿಗೆ ಥಳಿಸಲಾಗುತ್ತಿದೆ ಮತ್ತು ಕಲ್ಲು ತೂರಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕೆಂಡ ಕಾರಿದ್ದು, ಬಂದ್‌ಗೆ ಕರೆ ನೀಡುವ ಬದಲು ರಾಜಕೀಯ ಸಾವೇ ಮೇಲು ಎಂದು ಎಡಪಕ್ಷಗಳಿಗೆ ಮಾತಿನಿಂದ ತಿವಿದಿದ್ದಾರೆ.
ಬುಧವಾರ ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ಮಮತಾ ಮಂಗಳವಾರವೇ ಘೋಷಿಸಿದ್ದರು.
ಆದರೂ ಮುಷ್ಕರ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಭಾರಿ ಹಿಂಸಾಚಾರ ನಡೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ, "ಅವರು (ಎಡಪಕ್ಷಗಳು) ಕರೆ ನೀಡಿದ ಬಂದ್‌ಗಳನ್ನು ಹಿಂದೆಯೂ ಜನ ತಿರಸ್ಕರಿಸಿದ್ದರು. ಬಂದ್‌ಗೆ ಕರೆ ನೀಡುವ ಮೂಲಕ ಪ್ರಚಾರ ಗಿಟ್ಟಿಸುವ ಕೀಳು ತಂತ್ರ ಅನುಸರಿಸುತ್ತಿದ್ದಾರವರು. ಈ ರೀತಿಯ ಪ್ರಚಾರಕ್ಕಿಂತ, ರಾಜಕೀಯ ಅವಸಾನವೇ ಒಳಿತು" ಎಂದು ಕಿಡಿ ಕಾರಿದ್ದಾರೆ.
ವಿವಿಧೆಡೆ ಬೆಂಕಿ, ಕಲ್ಲು ತೂರಾಟ
ಬುಧವಾರದ ಬಂದ್ ವೇಳೆ ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾಚಾರ ನಡೆದಿತ್ತು. ಬಸ್ಸುಗಳಿಗೆ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದ್ದು, ಸರ್ಕಾರಿ ಆಸ್ತಿಪಾಸ್ತಿಗೂ ಹಾನಿಯುಂಟು ಮಾಡಲಾಗಿತ್ತು. ಮಾಲ್ಡಾದಲ್ಲಿ ಟೈರುಗಳನ್ನು ಸುಟ್ಟು, ಪೊಲೀಸ್ ವ್ಯಾನ್‌ಗೆ ಬೆಂಕಿ ಹಚ್ಚಲಾಗಿದೆ ಮತ್ತು ಹಲವಾರು ಸರ್ಕಾರಿ ಬಸ್ಸುಗಳನ್ನು ಪುಡಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಅಲ್ಲದೆ, ಕಚ್ಚಾ ಬಾಂಬ್‌ಗಳನ್ನೂ ಎಸೆಯಲಾಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು, ಅಶ್ರು ವಾಯು ಸಿಡಿಸಿದರು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಮತಾ ಎಚ್ಚರಿಕೆಯ ಹೊರತಾಗಿಯೂ, ರಾಜ್ಯದ ಕೆಲವೆಡೆ ರಸ್ತೆ ಹಾಗೂ ರೈಲು ಮಾರ್ಗಗಳನ್ನು ತಡೆಯಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪೂರ್ವ ಬುರ್ದ್ವಾನ್, ಪೂರ್ವ ಮಿಡ್ನಾಪುರ, ಕೂಚ್ ಬೆಹಾರ್ ಜಿಲ್ಲೆಗಳಲ್ಲೂ ಬಸ್ಸುಗಳಿಗೆ ಕಲ್ಲು ಎಸೆಯಲಾಯಿತು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಡಪಕ್ಷದ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಕನಿಷ್ಠ 175 ಲೋಕಲ್ ರೈಲುಗಳ ಯಾನವನ್ನು ರದ್ದುಗೊಳಿಸಲಾಗಿದೆ. ಬಸ್ ಹಾಗೂ ವಿಮಾನ ಸಂಚಾರಕ್ಕೂ ತೊಡಕಾಗಿತ್ತು.
6,000 ರೂ.ಗಳ ಕನಿಷ್ಠ ಪಿಂಚಣಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಜನರಿಗೆ ಸೂಕ್ತ ಪ್ರಮಾಣದಲ್ಲಿ ಪಡಿತರ ವಸ್ತುಗಳು ದೊರೆಯಬೇಕು ಮುಂತಾದ ಬೇಡಿಕೆಗಳೊಂದಿಗೆ ಎಡಪಂಥೀಯ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.