ADVERTISEMENT

ಸಾವರ್ಕರ್ ಬದಲು ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ?: ಮನೀಶ್ ತಿವಾರಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 9:03 IST
Last Updated 17 ಅಕ್ಟೋಬರ್ 2019, 9:03 IST
   

ನಾಗ್ಪುರ:ವೀರ ಸಾವರ್ಕರ್ ಬದಲಿಗೆ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ? ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು ಸಾವರ್ಕರ್‌ಗೆ ಭಾರತ ರತ್ನ ನೀಡುವ ಬಗ್ಗೆ ಪ್ರಸ್ತಾವಿಸಿತ್ತು. ಇದಕ್ಕೆ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಅವರ ಹತ್ಯೆ ಸಂಚಿನಲ್ಲಿ ಸಾವರ್ಕರ್ ಆರೋಪಿಯಷ್ಟೇ ಆಗಿದ್ದರು. ಆದರೆ ನಾಥೂರಾಮ್ ಗೋಡ್ಸೆ ಹತ್ಯೆಯನ್ನೇ ಮಾಡಿದ್ದಾರೆ. ಈ ವರ್ಷ ನಾವು ಮಹಾತ್ಮ ಗಾಂಧಿಯವರ 150ನೇ ಜನ್ಮ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಎನ್‌ಡಿಎ ಸರ್ಕಾರ ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಲಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಎನ್‌ಡಿಎ/ಬಿಜೆಪಿ ಸರ್ಕಾರ ಸಾವರ್ಕರ್‌ಗೆ ಯಾಕೆ ಭಾರತ ರತ್ನ ನೀಡಬೇಕು, ಗೋಡ್ಸೆಗೆ ಯಾಕೆ ನೀಡಬಾರದು? ಗಾಂಧಿ ಹತ್ಯೆ ಸಂಚಿಗೆ ಸಂಬಂಧಿಸಿ ಸಾವರ್ಕರ್ ಹೆಸರು ಚಾರ್ಜ್‌ಶೀಟ್‌ನಲ್ಲಷ್ಟೇ ಉಲ್ಲೇಖವಾಗಿತ್ತು. ನಂತರ ಅವರು ಆರೋಪಮುಕ್ತಗೊಂಡಿದ್ದರು. ಆದರೆ ಗೋಡ್ಸೆಯನ್ನು ದೋಷಿ ಎಂದು ಪರಿಗಣಿಸಲಾಗಿತ್ತಲ್ಲದೆ, ಗಲ್ಲಿಗೇರಿಸಲಾಗಿತ್ತು’ ಎಂದು ಟ್ವೀಟ್ ಕೂಡ ಮಾಡಿದ್ದಾರೆ ತಿವಾರಿ.

ಕಾಂಗ್ರೆಸ್ ನಾಯಕರಾದ ರಶೀದ್ ಅಲ್ವಿ ಮತ್ತು ದಿಗ್ವಿಜಯ್ ಸಿಂಗ್ ಕೂಡ ಬಿಜೆಪಿಯ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.