ADVERTISEMENT

ನಿಂದನೆಯು ಸಾರ್ವಜನಿಕವಾಗಿ ನಡೆದಿರಬೇಕು: SC, ST ಕಾಯ್ದೆ ಬಗ್ಗೆ ಕೋರ್ಟ್ ವಿವರಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:37 IST
Last Updated 18 ಮೇ 2024, 15:37 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಉದ್ದೇಶಪೂರ್ವಕ ನಿಂದನೆ ಹಾಗೂ ಅವಮಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಅಪರಾಧ ಅನ್ನಿಸಿಕೊಳ್ಳಬೇಕಿದ್ದರೆ, ಆ ಕೃತ್ಯವು ಇತರರಿಗೆ ಕಾಣಿಸುವಂತಹ ಸ್ಥಳದಲ್ಲಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಕಾಯ್ದೆಯ ಅಡಿಯಲ್ಲಿ ಮಾಡುವ ಯಾವುದೇ ಆರೋಪವು, ಅಪರಾಧಿಕ ಅಂಶಗಳನ್ನು ಹೊಂದಿದೆಯೇ ಎಂಬುದನ್ನು ತೀರ್ಮಾನಿಸುವಾಗ ‘ಸಾರ್ವಜನಿಕರಿಗೆ ಕಾಣಿಸುವ ಯಾವುದೇ ಸ್ಥಳದಲ್ಲಿ’ ಎಂದು ಕಾಯ್ದೆಯಲ್ಲಿ ಹೇಳಿರುವ ಮಾತು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

ADVERTISEMENT

‘ಸಾರ್ವಜನಿಕರಿಗೆ ಕಾಣಿಸುವಂತಹ ಸ್ಥಳದಲ್ಲಿ’ ಎಂಬ ವಿವರಣೆಯ ಅನ್ವಯ, ದೂರುದಾರರ ಹೊರತಾಗಿ ಇತರ ವ್ಯಕ್ತಿಗಳಿಗೆ ಕಾಣಿಸುವಂತೆ ಆ ಕೃತ್ಯ ನಡೆದಿರಬೇಕು ಎಂದು ಪೀಠವು ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಹೇಳಿದೆ. ಈ ಕಾಯ್ದೆಯ ಅಡಿಯಲ್ಲಿ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರೀತಿ ಅಗರ್ವಾಲ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಪೀಠವು ಈ ವಿವರಣೆ ನೀಡಿದೆ.

ಮೇಲ್ಮನವಿದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು, ಒಆರ್‌ಇಎ (ಒಲಿಂಪಿಕ್ ರೈಡಿಂಗ್ ಆ್ಯಂಡ್ ಈಕ್ವೇಸ್ಟ್ರಿಯನ್ ಅಕಾಡೆಮಿ) ಆಡಳಿತಾಧಿಕಾರಿಯ ಚಿತಾವಣೆಯ ಕಾರಣದಿಂದಾಗಿ ದೂರುದಾರರು ಈ ದೂರು ನೀಡಿದ್ದಾರೆ ಎಂದು ಹೇಳಿದ್ದರು. ವಾಟ್ಸ್ಆ್ಯಪ್‌ ಮೂಲಕ ನಡೆದಿರುವ ಮಾತುಕತೆಗಳು ಕಾಯ್ದೆಯ ಅಡಿಯಲ್ಲಿ ಅಪರಾಧಿಕ ಅಂಶಗಳನ್ನು ಹೊಂದಿರುವುದು ಮೇಲ್ನೋಟಕ್ಕೆ ಕಾಣುವುದಿಲ್ಲ ಎಂದೂ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.