ನವದೆಹಲಿ:‘ರಸ್ತೆ ರಹದಾರಿ (ಪರ್ಮಿಟ್) ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ವಾಹನದಿಂದ ಅಪಘಾತ ಸಂಭವಿಸಿದರೂ, ವಿಮಾ ಕಂಪನಿಯೇ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನದ ಮಾಲೀಕರಿಂದ ವಸೂಲಿ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2009ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
2009ರ ಮಾರ್ಚ್ 17ರಂದು ತುಮಕೂರು ರಸ್ತೆಯಲ್ಲಿ ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅದರಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರು. ಹಿಂಬದಿ ಸವಾರರಿಗೆ ಗಂಭೀರ ಗಾಯಗಳಾಗಿದ್ದವು. ಮೃತರ ಕುಟುಂಬಕ್ಕೆ ₹ 4.53 ಲಕ್ಷ ಮತ್ತು ಗಾಯಾಳುವಿಗೆ ₹ 1.72 ಲಕ್ಷ ಪರಿಹಾರ ಘೋಷಿಸಿತ್ತು. ಈ ತೀರ್ಪಿಗೆನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಆಕ್ಷೇಪ ವ್ಯಕ್ತಪಡಿಸಿತ್ತು. ಲಾರಿಗೆ ರಹದಾರಿ ಇಲ್ಲದ ಕಾರಣ ನಾವು ಪರಿಹಾರ ಕೊಡುವುದಿಲ್ಲ ಎಂದು ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.
ಸಂತ್ರಸ್ತರಿಗೆ ನಾವು ಪರಿಹಾರ ನೀಡಿ, ನಂತರ ಅದನ್ನು ಲಾರಿ ಮಾಲೀಕರಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ರಹದಾರಿ ಇಲ್ಲದ ಕಾರಣ ಲಾರಿ ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿಪರಿಹಾರವನ್ನು ಲಾರಿ ಮಾಲೀಕರೇ ಪಾವತಿ ಮಾಡಬೇಕು ಎಂದು ಕಂಪನಿ ವಾದಿಸಿತ್ತು. ಅದರ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿತ್ತು. ಆದರೆ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು ₹ 16 ಲಕ್ಷಕ್ಕೆ ಏರಿಸಿತ್ತು.
ಲಾರಿ ಮಾಲೀಕರಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ವಿಮಾ ಕಂಪನಿಯಿಂದಲೇ ಅದನ್ನು ಕೊಡಿಸಿ ಎಂದು ಮೃತ ವ್ಯಕ್ತಿಯ ಕುಟುಂಬದವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.