ನವದೆಹಲಿ: ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು 40 ಸುಖೊಯಿ ಯುದ್ಧ ವಿಮಾನಗಳಿಗೆ ಅಳವಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬಾಲಾಕೋಟ್ ವಾಯು ದಾಳಿ ನಡೆಸಿದ ಆರು ವಾರಗಳ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಭಾರತ–ರಷ್ಯಾ ಜಂಟಿ ಸಹಭಾಗಿತ್ವದ ಬ್ರಹ್ಮೋಸ್ ಏರೊಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಬಿಎಪಿಎಲ್) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ.
ಸುಖೊಯಿ ಯುದ್ಧ ವಿಮಾನದ ಜತೆ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಸಂಯೋಜಿಸುವುದರಿಂದ ವಾಯು ಪಡೆಗೆ ಮಹತ್ವದ ಸ್ಥಳಗಳ ಮೇಲೆ ಹೆಚ್ಚಿನ ಸಾಮರ್ಥ್ಯದೊಂದಿಗೆನಿಗಾವಹಿಸಲು ಸಾಧ್ಯವಾಗಲಿದೆ.ಸಮುದ್ರ ಮತ್ತು ಯುದ್ಧ ಭೂಮಿ ಮೇಲೆಯೂ ಪ್ರಾಬಲ್ಯ ಸಾಧಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಫೆಬ್ರುವರಿ 26ರಂದು ನಡೆದ ವಾಯು ದಾಳಿ ಬಗ್ಗೆ ಸರ್ಕಾರ ಪರಾಮರ್ಶೆ ನಡೆಸಿದಾಗ ವಾಯು ಪಡೆಯ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿಯೇ ಈ ಯೋಜನೆ ತ್ವರಿತಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಸುಖೊಯಿ ಯುದ್ಧ ವಿಮಾನಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಂಯೋಜಿಸುವ ಯೋಜನೆ ಮುಗಿದ ಬಳಿಕ ಸಮುದ್ರ ಅಥವಾ ಭೂಮಿ ಮೇಲೆ ದಾಳಿ ನಡೆಸುವ ವಾಯು ಪಡೆ ಸಾಮರ್ಥ್ಯ ಹಲವು ಪಟ್ಟು ಹೆಚ್ಚಲಿದೆ. 2016ರಲ್ಲೇ 40 ಸುಖೊಯಿ ಯುದ್ಧ ವಿಮಾನಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಂಯೋಜಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. 2017ರ ಅಂತ್ಯದಲ್ಲಿ ಈ ಯೋಜನೆ ಆರಂಭಗೊಂಡಿದ್ದರೂ ನಿಧಾನಗತಿಯಲ್ಲಿ ನಡೆಯುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.