ADVERTISEMENT

ಅದಾನಿ ಷೇರು ಹಗರಣ: ಜೆಸಿಪಿ ತನಿಖೆಗೆ ಮೋದಿ ಹೆದರುವುದೇಕೆ ಎಂಬುದು ಸ್ಪಷ್ಟ –ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2024, 3:10 IST
Last Updated 12 ಆಗಸ್ಟ್ 2024, 3:10 IST
<div class="paragraphs"><p>ರಾಹುಲ್‌ ಗಾಂಧಿ,&nbsp;ಪ್ರಧಾನಿ ಮೋದಿ</p></div>

ರಾಹುಲ್‌ ಗಾಂಧಿ, ಪ್ರಧಾನಿ ಮೋದಿ

   

ನವದೆಹಲಿ: ಹಿಂಡೆನ್‌ಬರ್ಗ್ ವರದಿಯಲ್ಲಿನ ಆರೋಪದಿಂದ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜಿಪಿಸಿ) ರಚಿಸಲು ಪ್ರಧಾನಿ ನರೇಂದ್ರ ಮೋದಿ ಹೆದರುವುದೇಕೆ ಎಂಬುದು ಸ್ಪಷ್ಟವಾಗಿದೆ ಎಂದೂ ಚಾಟಿ ಬೀಸಿದ್ದಾರೆ.

ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್, ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಮತ್ತು ಅವರ ಪತಿ ಧವಲ್‌ ಬುಚ್‌ ಪಾತ್ರವಿದೆ ಎಂದು ಆರೋಪಿಸಿದೆ.

ADVERTISEMENT

ಈ ಕುರಿತು ಎಕ್ಸ್‌/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‌, 'ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಸೆಬಿಯ ಅಧ್ಯಕ್ಷರ ವಿರುದ್ಧ ಆರೋಪ ಕೇಳಿಬಂದಿದೆ. ಇದರೊಂದಿಗೆ, ಸೆಬಿಯ ಸಮಗ್ರತೆಯನ್ನು ಗಂಭೀರವಾಗಿ ರಾಜಿ ಮಾಡಿಕೊಳ್ಳಲಾಗಿದೆ' ಎಂದು ಕಿಡಿಕಾರಿದ್ದಾರೆ.

ಹಾಗೆಯೇ, 'ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಅವರು ಈವರೆಗೆ ರಾಜೀನಾಮೆ ನೀಡಿಲ್ಲವೇಕೆ?, ಹೂಡಿಕೆದಾರರು ತಾವು ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಂಡರೆ ಅದಕ್ಕೆ ಯಾರು ಹೊಣೆ? – ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷೆ ಅಥವಾ ಗೌತಮ್‌ ಅದಾನಿಯೇ?, ಬೆಳಕಿಗೆ ಬಂದಿರುವ ಈ ಹೊಸ ಮತ್ತು ಗಂಭೀರ ಆರೋಪವನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸುತ್ತದೆಯೇ, ಮತ್ತೊಮ್ಮೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತದೆಯೇ? ಎಂದು ದೇಶದಾದ್ಯಂತ ಇರುವ ಪ್ರಾಮಾಣಿಕ ಹೂಡಿಕೆದಾರರು ಪ್ರಶ್ನಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಪ್ರಧಾನಿ ಮೋದಿ ಅವರು ಜಿಪಿಸಿ ತನಿಖೆಗೆ ಹೆದರುವುದೇಕೆ ಮತ್ತು ಆ ಸಮಿತಿಯು ಏನನ್ನು ಬಹಿರಂಗಪಡಿಸಬಹುದು ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದೂ ದೂರಿದ್ದಾರೆ.

ಅದಾನಿ ಷೇರು ಹಗರಣದ ಬಗ್ಗೆ 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್‌, ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪ ಮಾಡಿತ್ತು.

ಉದ್ಯಮಿ ಗೌತಮ್‌ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್‌ ದಂಪತಿಯ ಪಾಲುದಾರಿಕೆ ಇದೆ. ಅದಾನಿಯವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್‌ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಶನಿವಾರ (ಆಗಸ್ಟ್‌ 10ರಂದು)  ಆರೋಪ ಮಾಡಿದೆ.

ಈ ಪ್ರಕರಣದ ತನಿಖೆಗೆ ಜಿಪಿಸಿ ರಚಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ತಮ್ಮ ವಿರುದ್ಧದ ಆರೋಪಗಳನ್ನು ಅದಾನಿ ಸಮೂಹ ಮತ್ತು ಬುಚ್‌ ದಂಪತಿ ಅಲ್ಲಗಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.