ADVERTISEMENT

ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ

ಏಜೆನ್ಸೀಸ್
Published 29 ಆಗಸ್ಟ್ 2019, 10:00 IST
Last Updated 29 ಆಗಸ್ಟ್ 2019, 10:00 IST
ಗುಜರಾತಿನ ಬಂದರು (ಸಂಗ್ರಹ ಚಿತ್ರ)
ಗುಜರಾತಿನ ಬಂದರು (ಸಂಗ್ರಹ ಚಿತ್ರ)   

ನವದೆಹಲಿ: ಪಾಕಿಸ್ತಾನದ ಕಮಾಂಡೊಗಳು ಕಛ್ ಪ್ರದೇಶದ ಮೂಲಕ ಜಲ ಮಾರ್ಗವಾಗಿ ಬಂದು ಗುಜರಾತಿನಲ್ಲಿ ಕೋಮು ಸಂಘರ್ಷ ಅಥವಾ ಉಗ್ರ ಕೃತ್ಯ ನಡೆಸಲು ಸಂಚು ಹೂಡಿದ್ದಾರೆ ಎಂದು ಗುಪ್ತಚರ ದಳಎಚ್ಚರಿಕೆ ನೀಡಿದೆ.

ಇದೀಗ ಗುಜರಾತಿನಲ್ಲಿರುವ ಎಲ್ಲ ಬಂದರುಗಳಲ್ಲಿಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನದಿಂದ ತರಬೇತಿ ಪಡೆದ ಕಮಾಂಡೊಗಳು ಹರಾಮಿ ನಾಲಾ ಕೊಲ್ಲಿ ಪ್ರದೇಶದ ಮೂಲಕ ಕಛ್‌ಗೆ ಪ್ರವೇಶಿಸಲಿದ್ದಾರೆ. ನೀರಿನಡಿಯಲ್ಲಿ ದಾಳಿ ನಡೆಸಲು ಇವರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಕರಾವಳಿ ರಕ್ಷಣಾ ಕೇಂದ್ರ ಮಾಹಿತಿ ನೀಡಿರುವುದಾಗಿ ಅದಾನಿ ಬಂದರು ಮತ್ತು ಎಸ್‌ಇಜೆಡ್ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಗುಜರಾತಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮುಂದ್ರಾ ಬಂದರಿನಲ್ಲಿರುವ ಎಲ್ಲ ಹಡಗುಗಳನ್ನು ಭದ್ರತಾ ತಪಾಸಣೆಗೊಳಪಡಿಸಿ, ಎಲ್ಲಕಡೆ ನಿಗಾ ವಹಿಸಲಾಗಿದೆ ಎಂದು ಅದಾನಿ ಬಂದರು ಹೇಳಿಕೆ ನೀಡಿದೆ.

ಕಛ್‌ನಲ್ಲಿರುವ ದೀನ್ ದಯಾಳ್ ಪೋರ್ಟ್ಟ್ರಸ್ಟ್ (ಕಾಂಡ್ಲಾ ಪೋರ್ಟ್ ಟ್ರಸ್ಟ್) ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಬೋಟ್ ಬಳಿ ಅಥವಾ ಕರಾವಳಿ ಪ್ರದೇಶದಲ್ಲಿ ಅಡ್ಡಾಡುತ್ತಿರುವ ಸಂದೇಹಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಕರಾವಳಿಯ ಸುತ್ತುಮುತ್ತಲಿನ ಪ್ರದೇಶದಲ್ಲಿ ಎಲ್ಲ ಮನೆ ಮತ್ತು ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.