ಚೆನ್ನೈ: ಕಡ್ಡಾಯ ಹಿಂದಿ ಕಲಿಕೆ ಪ್ರಸ್ತಾವವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ‘ತಮಿಳುನಾಡು ಜನರಿಗೆ ಮೋಸ ಮಾಡುವ ಉದ್ದೇಶ ನಿಮಗಿತ್ತು. ನೀವು ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ತಮ್ಮ ತಂದೆ, ಡಿಎಂಕೆ ನಾಯಕ ಎಂ.ಕರುಣಾನಿಧಿ ಅವರ 96ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್, ‘ತಮಿಳುನಾಡಿನ ಮೇಲೆ ಮತ್ತೊಮ್ಮೆ ಹಿಂದಿ ಹೇರುವುದಿಲ್ಲ ಎಂದುಕೇಂದ್ರ ಸರ್ಕಾರ ಸ್ಪಷ್ಟ ಭರವಸೆ ಕೊಡಬೇಕು. ನನ್ನ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದರೆ 1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಗಳ ಮಾದರಿಯಲ್ಲಿ ತಮಿಳುನಾಡಿನಲ್ಲಿ ಹೋರಾಟಗಳು ಆರಂಭವಾಗಲಿವೆ’ ಎಂದು ಎಚ್ಚರಿಸಿದರು.
ಇದನ್ನೂ ಓದಿ...ಹಿಂದಿ: ಹಿಂದೆ ಸರಿದ ಕೇಂದ್ರ
ಸ್ವಾತಂತ್ರ್ಯಕ್ಕೆ ಮೊದಲು ಮತ್ತು 1965ರಲ್ಲಿ ಕರುಣಾನಿಧಿ ನೇತೃತ್ವದಲ್ಲಿ ನಡೆದ ಹಿಂದಿ ವಿರೋಧಿ ಹೋರಾಟಗಳನ್ನು ನೆನಪಿಸಿಕೊಂಡ ಸ್ಟಾಲಿನ್, ‘ಈಗ ಮತ್ತೊಮ್ಮೆ ಅಂಥ ಹೋರಾಟಗಳನ್ನು ಸಂಘಟಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
‘ಹಿಂದಿ ಹೇರಿಕೆಯನ್ನು ಹಿಂಪಡೆಯಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಹೇಳಿಕೆ ಆಧಾರ ರಹಿತ. ಸರಿಯಾದ ವಿವರಣೆಗಳಿಲ್ಲದ ಇಂಥ ಹೇಳಿಕೆಗಳನ್ನು ನಂಬಲು ಆಗುವುದಿಲ್ಲ. ಇನ್ನು ಎರಡು–ಮೂರು ದಿನಗಳಲ್ಲಿ ಸರಿಯಾದ ಸ್ಪಷ್ಟನೆ ಹೊರಬೀಳದಿದ್ದರೆ ರಾಜ್ಯದಲ್ಲಿ ಬೃಹತ್ ಹೋರಾಟ ಸಂಘಟಿಸಬೇಕಾಬಹುದು. ಅದಕ್ಕೆ ಸಿದ್ಧರಾಗಿರಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಸ್ಟಾಲಿನ್ ಕರೆ ನೀಡಿದರು.
ಹಿಂದಿ ಹೇರಿಕೆಯ ಹುನ್ನಾರಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾದ ಕಾರಣಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾಷೆಗಳ ವಿಚಾರದಲ್ಲಿ ನಾಟಕ ಆಡುತ್ತಿದೆ ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.