ನವದೆಹಲಿ: ಅಂತರರಾಜ್ಯ ಗಡಿ ವಿವಾದಗಳನ್ನು, ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಸಹಕಾರದಿಂದ ಮಾತ್ರ ಬಗೆಹರಿಸಲು ಸಾಧ್ಯವಿದ್ದು, ಇಂಥ ಪ್ರಕರಣಗಳಲ್ಲಿ ಕೇಂದ್ರವು ‘ಸಹಾಯಕ‘ನಾಗಿ ಮಾತ್ರ ಕೆಲಸ ಮಾಡಬಹುದು ಎಂದು ಕೇಂದ್ರ ಸರ್ಕಾರದ ಮಂಗಳವಾರ ಸಂಸತ್ತಿಗೆ ತಿಳಿಸಿತು.
ಲೋಕಸಭೆಯಲ್ಲಿ, ದೇಶದಲ್ಲಿರುವ ಅಂತರರಾಜ್ಯ ಗಡಿವಿವಾದಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರ ನೀಡಿದರು.
‘ಅಂತರರಾಜ್ಯ ವಿವಾದಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಸಹಕಾರದಿಂದ ಮಾತ್ರ ಪರಿಹರಿಸಬಹುದು. ರಾಜ್ಯಗಳ ನಡುವೆ ತಿಳಿವಳಿಕೆ ಮೂಡಿಸುವ ಮೂಲಕ ಸೌಹಾರ್ದಯುತವಾಗಿ ವಿವಾದ ಬಗೆಹರಿಸಬಹುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೇವಲ ಸಹಾಯಕರಾಗಿ ಕಾರ್ಯನಿರ್ವಹಿಸುತ್ತದೆ‘ ಎಂದು ರೈ ಹೇಳಿದರು.
ಇದೇ ವೇಳೆ ನಿತ್ಯಾನಂದ ರೈ ಅವರು ಅಸ್ಸಾಂ ರಾಜ್ಯದಲ್ಲಿರುವ ನಾಲ್ಕು ವಿವಾದಗಳು ಸೇರಿದಂತೆ ದೇಶದಲ್ಲಿರುವ ಏಳು ಅಂತರರಾಜ್ಯ ವಿವಾದಗಳನ್ನು ಉಲ್ಲೇಖಿಸಿದರು.
ಲಭ್ಯವಿರುವ ಮಾಹಿತಿ ಪ್ರಕಾರ, ಹರಿಯಾಣ– ಹಿಮಾಚಲ ಪ್ರದೇಶ, ಕೇಂದ್ರಾಡಳಿತ ಪ್ರದೇಶದ ಲಡಾಖ್ – ಹಿಮಾಚಲ ಪ್ರದೇಶ, ಮಹಾರಾಷ್ಟ್ರ– ಕರ್ನಾಟಕ, ಅಸ್ಸಾಂ–ಅರುಣಾಚಲ ಪ್ರದೇಶ, ಅಸ್ಸಾಂ–ನಾಗಾಲ್ಯಾಂಡ್, ಅಸ್ಸಾಂ–ಮೇಘಾಲಯ ಮತ್ತು ಅಸ್ಸಾಂ – ಮಿಜೋರಾಂ ನಡುವೆ ಗಡಿ ವಿವಾದಗಳು ನಡೆಯುತ್ತಿವೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.