ADVERTISEMENT

ಇಬ್ಬರು ಅಂತಾರಾಜ್ಯ ಡ್ರಗ್ ಪೆಡ್ಲರ್ಸ್‌ ಬಂಧನ

ಪಿಟಿಐ
Published 4 ಜೂನ್ 2024, 15:54 IST
Last Updated 4 ಜೂನ್ 2024, 15:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ: ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಇಬ್ಬರು ಅಂತರರಾಜ್ಯ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಲಾಗಿದ್ದು, ₹42 ಲಕ್ಷ ಮೌಲ್ಯದ 348.58 ಗ್ರಾಂ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಟಾನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಮೂಲಗಳಿಂದ ಸುಳಿವು ಸಿಕ್ಕಿತ್ತು. ಇದನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಉರ್ಗೆನ್‌ ದೊರ್ಜಿ(21) ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ 65 ಗ್ರಾಂ ಹೆರಾಯಿನ್‌ ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ವೇಳೆ ಆತ, ಟಿಥಾಯ್‌ ಪೋವ್‌ ಗೋಲ್ಮೈ(28) ಹೆಸರಿನ ಮಣಿಪುರಿ ಯುವಕನಿಗೆ ಡ್ರಗ್‌ ಸರಬರಾಜು ಮಾಡುತ್ತಿದ್ದುದಾಗಿ ಬಾಯಿ ಬಿಟ್ಟಿದ್ದ. ಅಲ್ಲದೆ, ಶೀಘ್ರದಲ್ಲೇ ಗೋಲ್ಮೈ ಇಂಫಾಲ್‌ನಿಂದ ಇಟಾನಗರಕ್ಕೆ ಬಸ್‌ ಮೂಲಕ ಹೆಚ್ಚಿನ ಡ್ರಗ್ಸ್‌ ತರುವ ಮಾಹಿತಿ ನೀಡಿದ್ದ’ ಎಂದು ಎಸ್‌ಪಿ ರೋಹಿತ್‌ ರಾಜ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

‘ಬಂಧಿತ ದೊರ್ಜಿ ನೀಡಿದ್ದ ಮಾಹಿತಿಯನ್ನು ಆಧರಿಸಿ ಗೋಲ್ಮೈನನ್ನು ಬಂಧಿಸಲಾಗಿದೆ. ಆತನ ಬಳಿಯಿದ್ದ 283.58 ಗ್ರಾಂ ಹೆರಾಯಿನ್‌ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್‌) ಅಡಿ ಪ್ರಕರಣ ದಾಖಲಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.