ನವದೆಹಲಿ: ಲೋಕಸಭಾ ಚುನಾವಣೆಗಳು ಹೊಸ್ತಿಲಲ್ಲಿರುವಾಗಲೇ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ರೈತರ ಆರ್ಥಿಕ ಸಂಕಷ್ಟ, ನೋವುಗಳನ್ನು ಶಮನಗೊಳಿಸುವ ಯತ್ನಕ್ಕೆ ಕೈ ಹಾಕಿದೆ.
ಸಕಾಲದಲ್ಲಿ ಬೆಳೆಸಾಲ ಮರು ಪಾವತಿಸಿದ ರೈತರ ಶೇ 4ರಷ್ಟು ಬಡ್ಡಿಯನ್ನು ಮನ್ನಾ ಮಾಡಲು ಚಿಂತನೆ ನಡೆಸಿದೆ.
ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ₹15 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ರೈತರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುವ ಚಿಂತನೆ ನಡೆದ ಬೆನ್ನಲ್ಲೇ ಇಂತಹ ಮತ್ತೊಂದು ಮಹತ್ವದ ಸುದ್ದಿ ಸರ್ಕಾರದ ಪಡಸಾಲೆಯಿಂದ ಹೊರಬಿದ್ದಿದೆ.
ಈ ಕುರಿತು ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಡ್ಡಿದರ ಮನ್ನಾ ಮಾಡುವ ನಿರ್ಧಾರ ತಕ್ಷಣದಿಂದಲೇ ಜಾರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಕಾಂಗ್ರೆಸ್ ಸಾಲಮನ್ನಾ ಭರವಸೆಯು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಗಿತ್ತು.
ಈ ನಡುವೆ ರೈತರ ಸಾಲ ಮನ್ನಾ ಮಾಡುವ ತನಕ ಪ್ರಧಾನಿ ನರೇಂದ್ರ ಮೋದಿಗೆ ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದರು.
ವಿಮಾ ಕಂತಿನ ಹೊರೆ ಇಳಿಸಲು ಕೇಂದ್ರ ಚಿಂತನೆ
ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿ ರೈತರ ಬೆಳೆವಿಮಾ ಕಂತುಗಳ ಹೊರೆಯನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಆಹಾರಧಾನ್ಯಗಳ ಬೆಳೆವಿಮಾ ಕಂತುಗಳನ್ನು ಸಂಪೂರ್ಣವಾಗಿ ಕೈಬಿಡುವ ಚಿಂತನೆ ನಡೆಸಿದೆ.
ಇದರೊಂದಿಗೆ ತೋಟಗಾರಿಕೆ ಬೆಳೆವಿಮಾ ಕಂತುಗಳ ಮೊತ್ತವನ್ನೂ ಕಡಿತಗೊಳಿಸಲು ಸರ್ಕಾರ ಯೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಕ್ಷೇತ್ರದ ಬಿಕ್ಕಟ್ಟುಗಳ ನಿವಾರಣೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.
* ಸಾಲಮನ್ನಾ ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟು 2019ರ ಲೋಕಸಭಾ ಚುನಾವಣೆಯ ಪ್ರಮುಖ ವಿಷಯಗಳಾಗಲಿವೆ
– ರಾಜಕೀಯ ತಜ್ಞರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.