ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಶ್ಲಾಘಿಸಿದ ಕೇಂದ್ರ ಸಚಿವರು, 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಮತ್ತು ಆರ್ಥಿಕವಾಗಿ ಸದೃಢವಾದ ಭಾರತಕ್ಕೆ ನಿರ್ಣಾಯಕ ಮಾರ್ಗಗಳನ್ನು ರೂಪಿಸುತ್ತದೆ ಎಂದು ಪ್ರತಿಪಾದಿಸಿದರು.
ಗುರುವಾರ ಸಂಸತ್ತಿನಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ಗೆ ಪ್ರತಿಕ್ರಿಯಿಸಿದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್, '10 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ನೀಡಿದ ಭರವಸೆಗಳನ್ನು ಅವರು ಇಂದು ಈಡೇರಿಸಿದ್ದಾರೆ. ಇದರಿಂದಾಗಿ ದೇಶವು ಜಾಗೃತಗೊಂಡಿದೆ ಮತ್ತು ದೇಶದ ಪ್ರತಿಯೊಂದು ಹಂತದಲ್ಲೂ ಅಭಿವೃದ್ಧಿ ಗೋಚರಿಸುತ್ತಿದೆ' ಎಂದು ಶ್ಲಾಘಿಸಿದರು.
ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವಲ್ಲಿ ಮತ್ತು ಆರ್ಥಿಕತೆಯನ್ನು ಬಲಪಡಿಸಲು ಬಜೆಟ್‌ನ ಪಾತ್ರವನ್ನು ಅವರು ಒತ್ತಿ ಹೇಳಿದರು. ಈ ಬಜೆಟ್ ಮೂಲಕ, 2047ರ ವೇಳೆಗೆ ಭಾರತವು ನಿಸ್ಸಂದೇಹವಾಗಿ ಬಲಿಷ್ಠ ಮತ್ತು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬುದು ಸ್ಪಷ್ಟವಾಗಿದೆ ಎಂದೂ ಅವರು ಪ್ರತಿಪಾದಿಸಿದರು.
ಆರೋಗ್ಯ ಖಾತೆಯ ರಾಜ್ಯ ಸಚಿವ ಎಸ್.ಪಿ ಸಿಂಗ್ ಬಘೆಲ್ ಪ್ರತಿಕ್ರಿಯಿಸಿ, ‘ಈ ಬಜೆಟ್ ಸಮಾಜದ ಪ್ರತಿಯೊಂದು ವರ್ಗದ ಜನರ ಅಗತ್ಯತೆಗಳನ್ನು ಪರಿಗಣಿಸಿದ್ದು, ಭಾರತದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕುತ್ತದೆ' ಎಂದು ಹೇಳಿದರು.
ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸುತ್ತಾ, ‘2047ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮುನ್ನಡೆಸುವಲ್ಲಿ ಮಧ್ಯಂತರ ಬಜೆಟ್ ನಿರ್ಣಯಕ ಪಾತ್ರ ವಹಿಸುತ್ತದೆ' ಎಂದು ಹೇಳಿದರು.
ಇದು ಮಧ್ಯಂತರ ಬಜೆಟ್ ಆಗಿದ್ದರೂ ಮೂಲಸೌಕರ್ಯ, ಸಾಮಾಜಿಕ ಕ್ಷೇತ್ರ, ಕೃಷಿ ಮತ್ತು ಕಡಲ ಆರ್ಥಿಕತೆ ಸೇರಿದಂತೆ ಪ್ರತಿಯೊಂದು ವಲಯಕ್ಕೂ ಗಮನ ಹರಿಸಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.