ನವದೆಹಲಿ: ಕೋವಿಡ್ ಹೊಸ ಪ್ರಕಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ ರದ್ದು ಆದೇಶವನ್ನು ಏ. 30 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
‘ಈಗಾಗಲೇ ಹೊರಡಿಸಿರುವ ಸುತ್ತೋಲೆಯ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದ್ದು, ಭಾರತದಿಂದ ಹೊರಡುವ ಮತ್ತು ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಸೇವೆಯನ್ನು ಏ.30ರವರೆಗೆ ರದ್ದುಪಡಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ಉಲ್ಲೇಖಿಸಿದೆ.
‘ಈ ನಿರ್ಬಂಧವು ಸರಕು ಸಾಗಣೆ ವಿಮಾನಗಳಿಗೆ ಹಾಗೂ ಡಿಜಿಸಿಎಯಿಂದ ಒಪ್ಪಿಗೆ ಪಡೆದು ಕಾರ್ಯಾಚರಣೆ ನಡೆಸುವ ವಿಮಾನಗಳಿಗೆ ಅನ್ವಯಿಸುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೋವಿಡ್ ಕಾರಣದಿಂದಾಗಿ ಕಳೆದ 2020ರ ಮಾರ್ಚ್ 23ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧಿಸಲಾಗಿದೆ. ವಂದೇ ಭಾರತ್ ಮಿಷನ್‌ನಡಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಮೇ 7ರಿಂದ ವಿಶೇಷ ವಿಮಾನಗಳನ್ನು ನಿಯೋಜಿಸಲಾಗಿತ್ತು. ಈ ಸೇವೆ ಮುಂದುವರಿದಿದೆ.
ಇದನ್ನೂ ಓದಿ... ಕೋವಿಡ್ ಲಸಿಕೆ: ವಿತರಣೆಗೆ ಸಮಸ್ಯೆ ಇಲ್ಲ ಎಂದ ಆರೋಗ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.