ADVERTISEMENT

ಮಹಿಳಾ ದಿನಾಚರಣೆ: ರಾಂಚಿ - ಟೋರಿ ರೈಲು ನಿರ್ವಹಿಸಿದ ಮಹಿಳಾ ತಂಡ

ಪಿಟಿಐ
Published 8 ಮಾರ್ಚ್ 2024, 9:42 IST
Last Updated 8 ಮಾರ್ಚ್ 2024, 9:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಂಚಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು (ಶುಕ್ರವಾರ) 16 ಮಹಿಳಾ ಸಿಬ್ಬಂದಿಯ ತಂಡ ರಾಂಚಿ ಮತ್ತು ಟೋರಿ ಜಂಕ್ಷನ್‌ ನಡುವಿನ ರೈಲು ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ಈ ತಂಡದಲ್ಲಿ ಲೊಕೊ ಪೈಲಟ್, ಸಹಾಯಕ ಲೊಕೊ ಪೈಲಟ್, ರೈಲು ಮ್ಯಾನೇಜರ್, ಎಂಟು ಟಿಕೆಟ್ ಕಲೆಕ್ಟರ್‌ಗಳು ಹಾಗೂ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಐವರು ಸಿಬ್ಬಂದಿ ಇದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆಗ್ನೇಯ ರೈಲ್ವೆಯ (ಎಸ್‌ಇಆರ್) ರಾಂಚಿ ವಿಭಾಗವು ರಾಷ್ಟ್ರ ನಿರ್ಮಾಣಕ್ಕಾಗಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಇಂದು ರಾಂಚಿ ಮತ್ತು ಟೋರಿ ಜಂಕ್ಷನ್‌ ನಡುವಿನ ರೈಲು ಕಾರ್ಯಾಚರಣೆಯ ಉಸ್ತುವಾರಿಯನ್ನು ಮಹಿಳೆಯರು ವಹಿಸಿಕೊಂಡಿದ್ದಾರೆ. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ’ ಎಂದು ಹಿರಿಯ ವಿಭಾಗೀಯ ವ್ಯವಸ್ಥಾಪಕ ನಿಶಾಂತ್ ಕುಮಾರ್ ‘ಪಿಟಿಐ’ಗೆ ತಿಳಿಸಿದ್ದಾರೆ.

ರಾಂಚಿ ಮತ್ತು ಟೋರಿ ಜಂಕ್ಷನ್‌ಗಳ ನಡುವಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಬುಕಿಂಗ್ ಕೌಂಟರ್‌ಗಳನ್ನು ಸಹ ಮಹಿಳೆಯರೇ ನಿರ್ವಹಿಸಿರುವುದು ವಿಶೇಷ ಎಂದು ನಿಶಾಂತ್ ವಿವರಿಸಿದ್ದಾರೆ.

ರೈಲು ರಾಂಚಿ ನಿಲ್ದಾಣದಿಂದ ಬೆಳಿಗ್ಗೆ 8.55ಕ್ಕೆ ಹೊರಟಿದ್ದು, ಒಟ್ಟು 14 ನಿಲ್ದಾಣಗಳನ್ನು ಒಳಗೊಂಡಂತೆ 11:30ರ ಸುಮಾರಿಗೆ ಟೋರಿ ತಲುಪಿದೆ ಎಂದು ಅವರು ಹೇಳಿದ್ದಾರೆ.

‘ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದೇವೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು ರೈಲನ್ನು ಚಲಾಯಿಸಲು ತುಂಬಾ ಸಂತೋಷವಾಗುತ್ತಿದೆ’ ಎಂದು ಹಿರಿಯ ಲೋಕೊ-ಪೈಲಟ್ ಗೀತಾ ಖಾಲ್ಕೊ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.