ADVERTISEMENT

ಯೋಗ – ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ: ಪ್ರಧಾನಿ ಮೋದಿ

ಪಿಟಿಐ
Published 21 ಜೂನ್ 2024, 5:17 IST
Last Updated 21 ಜೂನ್ 2024, 5:17 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ಶ್ರೀನಗರ: ಜಗತ್ತು ಯೋಗವನ್ನು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಕಾಶ್ಮೀರದ 'ಶೇರ್‌ ಇ ಕಾಶ್ಮೀರ್ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌'ನಲ್ಲಿ (ಎಸ್‌ಕೆಐಸಿಸಿ) 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನರು ತಮ್ಮ ವೈಯಕ್ತಿಕ ಯೋಗಕ್ಷೇಮಕ್ಕೂ ಸಮಾಜದ ಕಲ್ಯಾಣಕ್ಕೂ ಸಂಬಂಧವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತತ ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಮೊದಲ ಸಲ ಕಾಶ್ಮೀರಕ್ಕೆ ಬಂದಿರುವ ಮೋದಿ, 'ಯೋಗವು ಜಾಗತಿಕ ಕ್ಷೇಮದ ಪ್ರಬಲ ರಾಯಭಾರಿ ಎಂಬಂತೆ ಜಗತ್ತು ನೋಡುತ್ತಿದೆ. ನಡೆದುಹೋದ ವಿಚಾರಗಳನ್ನು ಬದಿಗೆ ಸರಿಸಿ ನಾವೆಲ್ಲ ವರ್ತಮಾನದಲ್ಲಿ ಬದುಕಲು ಯೋಗ ನೆರವಾಗಿದೆ' ಎಂದಿದ್ದಾರೆ.

'ನಾವು ಒಳಗಿಂದ ಶಾಂತವಾಗಿದ್ದಾಗ, ಜಗತ್ತಿನ ಮೇಲೂ ಧನಾತ್ಮಕ ಪರಿಣಾಮವನ್ನು ಉಂಟುಮಾಡಬಲ್ಲೆವು. ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ಯೋಗ ಪರಿಚಯಿಸಿದೆ' ಎಂದು ಪ್ರತಿಪಾದಿಸಿದ್ದಾರೆ.

ಇಲ್ಲಿನ ದಾಲ್‌ ಸರೋವರದ ತೀರದಲ್ಲಿರುವ ಎಸ್‌ಕೆಐಸಿಸಿ ಉದ್ಯಾನದಲ್ಲಿ ಬೆಳಿಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಮುಂಜಾನೆಯೇ ಸುರಿದ ಭಾರಿ ಮಳೆಯಿಂದಾಗಿ, ಕಾರ್ಯಕ್ರಮವನ್ನು  ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು.

'ಜಗತ್ತಿನಾದ್ಯಂತ ಯೋಗ ಅಭ್ಯಾಸ ಮಾಡುತ್ತಿರುವ ಜನರು ನಿರಂತರವಾಗಿ ಅಭಿವೃದ್ಧಿ ಸಾಧಿಸುತ್ತಿದ್ದಾರೆ. ನಾನು ಎಲ್ಲಿಗೇ (ವಿದೇಶಗಳಿಗೆ) ಹೋದರೂ, ಯೋಗದ ಪ್ರಯೋಜನಗಳ ಬಗ್ಗೆ ಮಾತನಾಡದ ವಿಶ್ವನಾಯಕರನ್ನು ಕಾಣಲಾರೆ' ಎಂದಿದ್ದಾರೆ.

ತುರ್ಕ್ಮೇನಿಸ್ತಾನ, ಸೌದಿ ಅರೇಬಿಯಾ, ಮಂಗೋಲಿಯಾ ಮತ್ತು ಜರ್ಮಮಿ ದೇಶಗಳನ್ನು ಉಲ್ಲೇಖಿಸಿ, 'ಸಾಕಷ್ಟು ರಾಷ್ಟ್ರಗಳಲ್ಲಿ ಯೋಗವು ಜನರ ಬದುಕಿನ ಭಾಗವಾಗಿದೆ' ಎಂದು ತಿಳಿಸಿದ್ದಾರೆ.

'ಪ್ರಾಚಿನ ಧ್ಯಾನವು ಜನಪ್ರಿಯಗೊಳ್ಳುತ್ತಿದೆ' ಎಂದೂ ಹೇಳಿದ್ದಾರೆ.

ಪದ್ಮಶ್ರೀ ಪುರಸ್ಕೃತ ಫ್ರೆಂಚ್‌ ಮಹಿಳೆ ಶಾರ್ಲೆಟ್ ಚಾಪಿನ್‌ (101) ಅವರ ಬಗ್ಗೆಯೂ ಮೋದಿ ಮಾತನಾಡಿದರು. ಶಾರ್ಲೆಟ್ ಅವರು ಫ್ರಾನ್ಸ್‌ನಲ್ಲಿ ಯೋಗವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ, ಭಾರತ ಸರ್ಕಾರ ಅವರನ್ನು ಗೌರವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.