ADVERTISEMENT

International Yoga Day | ಯೋಗವನ್ನು ಜನಪ್ರಿಯಗೊಳಿಸಿದ್ದು ನೆಹರೂ: ಕಾಂಗ್ರೆಸ್ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2023, 10:28 IST
Last Updated 21 ಜೂನ್ 2023, 10:28 IST
ಜವಾಹರಲಾಲ್ ನೆಹರೂ (ಬಲಗಡೆ ಇರುವುದು ಸಾಂದರ್ಭಿಕ ಚಿತ್ರ)
ಜವಾಹರಲಾಲ್ ನೆಹರೂ (ಬಲಗಡೆ ಇರುವುದು ಸಾಂದರ್ಭಿಕ ಚಿತ್ರ)   

ಬೆಂಗಳೂರು: ಯೋಗವನ್ನು ಜನಪ್ರಿಯಗೊಳಿಸಿದ್ದು ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ಎಂದು ಕಾಂಗ್ರೆಸ್‌ ಬುಧವಾರ ಹೇಳಿಕೊಂಡಿದೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ರಾಷ್ಟ್ರೀಯ ನೀತಿಯ ಭಾಗವಾಗಿಸಿದ ಪಂಡಿತ್‌ ನೆಹರೂ ಅವರಿಗೆ ಅಂತರರಾಷ್ಟ್ರೀಯ ಯೋಗ ದಿನದಂದು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಲ್ಲಿ ಪ್ರಾಚೀನ ಕಲೆ ಮತ್ತು ತತ್ವದ ಮಹತ್ವವನ್ನು ಅರಿಯೋಣ. ಅದನ್ನು ಅಳವಡಿಸಿಕೊಳ್ಳಲು ಮುಂದಾಗೋಣ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ನೆಹರೂ ಅವರು ಯೋಗ ಮಾಡುತ್ತಿರುವ ಚಿತ್ರವನ್ನೂ ಕಾಂಗ್ರೆಸ್‌ ಹಂಚಿಕೊಂಡಿದೆ.

ADVERTISEMENT

ಈ ಟ್ವೀಟ್‌ ಅನ್ನು ಹಂಚಿಕೊಂಡಿರುವ ಹಿರಿಯ ನಾಯಕ ಶಶಿ ತರೂರ್‌, 'ವಾಸ್ತವವಾಗಿ, ವಿಶ್ವಸಂಸ್ಥೆಯ ಮೂಲಕ ಯೋಗ ದಿನವನ್ನು ಅಂತರರಾಷ್ಟ್ರೀಯಗೊಳಿಸುವುದಕ್ಕಾಗಿ ನಮ್ಮ ಸರ್ಕಾರ, ಪ್ರಧಾನ ಮಂತ್ರಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯ ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿದ ಮತ್ತು ಜನಪ್ರಿಯಗೊಳಿಸಿದ ಎಲ್ಲರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ನಾನು ದಶಕಗಳಿಂದ ವಾದಿಸುತ್ತಿರುವಂತೆ, ಯೋಗವು ಪ್ರಪಂಚದಾದ್ಯಂತ ನಮ್ಮ ಸಾಮರ್ಥ್ಯದ ಭಾಗವಾಗಿದೆ ಮತ್ತು ಅದನ್ನು ಗುರುತಿಸುತ್ತಿರುವುದನ್ನು ನೋಡಲು ಹೆಮ್ಮೆ ಎನಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ಇಂದು ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಯೋಗಕ್ಕೆ ಜಾಗತಿಕ ಮಾನ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಮಿಷನ್‌ 2014ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆ ಪ್ರಸ್ತಾವವನ್ನು ಮಾನ್ಯ ಮಾಡಿದ್ದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು, ಪ್ರತಿ ವರ್ಷ ಜೂನ್‌ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಒಪ್ಪಿಗೆ ಸೂಚಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.