ADVERTISEMENT

ಮಣಿಪುರ: ವಿದ್ಯಾರ್ಥಿಗಳ ಹತ್ಯೆ– 5 ದಿನ ಇಂಟರ್‌ನೆಟ್‌ ಸೇವೆ ಸ್ಥಗಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2023, 15:52 IST
Last Updated 26 ಸೆಪ್ಟೆಂಬರ್ 2023, 15:52 IST

ಇಂಫಾಲ: ಮಣಿಪುರದ ಇಂಫಾಲದಲ್ಲಿ ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜುಲೈ 6ರಿಂದ ನಾಪತ್ತೆಯಾಗಿದ್ದ, ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ನಂತರ ಇಂಫಾಲದಲ್ಲಿ ಬಿಗುವಿನ ವಾತಾವರಣ ಮನೆಮಾಡಿದೆ.

ಈ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ‘ತಕ್ಷಣದಿಂದ ಜಾರಿಗೆ ಬರುವಂತೆ ಐದು ದಿನಗಳ ಕಾಲ ಅಂದರೆ ಅಕ್ಟೋಬರ್ 1 ರ ಸಂಜೆ 7:45 ರವರೆಗೆ ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ VPN ಮೂಲಕ ಮೊಬೈಲ್ ಇಂಟರ್ನೆಟ್ ಡೇಟಾ ಸೇವೆಗಳು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ’ ಎಂದು  ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದೆ.

ADVERTISEMENT

ಕಾನೂನು ಮತ್ತು ಸುವ್ಯಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಳ್ಳು ಸುದ್ದಿ ಹರಡುವಿಕೆ ತಡೆಗೆ ಸೇರಿದಂತೆ ಅಹಿತಕರ ಘಟನೆಯನ್ನು ತಡೆಯುವ ಉದ್ದೇಶದಿಂದ ಇಂಟರ್‌ನೆಟ್‌ ಸೇವೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ಹತ್ಯೆಯನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ, ಲಾಠಿ ಚಾರ್ಜ್‌ ಮಾಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ

ಈ ನಡುವೆ ದುಷ್ಕರ್ಮಿಗಳ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಓದಿ: ನಾ‍ಪತ್ತೆಯಾದ ವಿದ್ಯಾರ್ಥಿಗಳ ಮೃತದೇಹದ ಫೋಟೊ ಹರಿದಾಟ: ಮಣಿಪುರದಲ್ಲಿ ಅಲರ್ಟ್‌

ಈ ಹಿಂದೆ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ನಡೆದ ಸಂಘರ್ಷದ ಕಾರಣದಿಂದ ಸ್ಥಗಿತಗೊಂಡಿದ್ದ ಇಂಟರ್‌ನೆಟ್‌ ಸೇವೆಯನ್ನು ಕಳೆದ ಕೆಲವು ದಿನಗಳ ಹಿಂದೆ ಮರುಸ್ಥಾಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.