ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪಿಎನ್‌ಬಿ ಹಗರಣದ ರೂವಾರಿ ಹಾಗೂ ವಜ್ರಾಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕೆ ಇಂಟರ್‌ಪೋಲ್ ಒಂದೆರೆಡು ದಿನದಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ.
ನೀರವ್ ಹಸ್ತಾಂತರಿಸಲು ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐ, ಇಂಟರ್‌ಪೋಲ್‌ಗೆ ಪತ್ರ ಬರೆದಿತ್ತು.
‘ನೀರವ್ ವಿರುದ್ಧದ ಪ್ರಕರಣಗಳ ಸಮಗ್ರ ವಿವರ ಮತ್ತು ಮುಂಬೈ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್ ಅನ್ನು ಇಂಟರ್‌ಪೋಲ್‌ಗೆ ಒದಗಿಸಲಾಗಿದೆ. ಪತ್ರಕ್ಕೆ ಸ್ಪಂದಿಸಿರುವ ಇಂಟರ್‌ಪೋಲ್ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಪಿಎನ್‌ಬಿ ಹಗರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿವೆ. ಕಳೆದ ಜನವರಿಯ ಮೊದಲ ವಾರದಲ್ಲೇ ನೀರವ್ ಮತ್ತು ಚೋಕ್ಸಿ ದೇಶ ತೊರೆದಿದ್ದಾರೆ.
ಬಂಧನ ವಾರಂಟ್
ಸೂರತ್: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,000 ಕೋಟಿ ವಂಚಿಸಿ, ತಲೆಮರೆಸಿಕೊಂಡಿರುವ ನೀರವ್ ಮೋದಿ ವಿರುದ್ಧ ಸೂರತ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
ವಿಚಾರಣೆಗೆ ನೀರವ್ ಮೋದಿ ಹಾಜರಾಗದಿರುವುದಕ್ಕೆ ನ್ಯಾಯಾಧೀಶ ಬಿ.ಎಚ್.ಕಪಾಡಿಯಾ ಆದೇಶ ಹೊರಡಿಸಿದ್ದಾರೆ. ₹52 ಕೋಟಿ ಕಸ್ಟಮ್ಸ್ ಡ್ಯೂಟಿ ವಂಚಿಸಿದ ಕಾರಣಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನೀರವ್ ವಿರುದ್ಧ ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಉತ್ಕೃಷ್ಟ ದರ್ಜೆಯ ವಜ್ರ ಮತ್ತು ಹರಳು ಆಮದು ಮಾಡಿಕೊಂಡು, ದಾಖಲೆಯಲ್ಲಿ ಕಡಿಮೆ ದರ್ಜೆಯದ್ದೆಂದು ತೋರಿಸಿದ ಆರೋಪ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.