ADVERTISEMENT

ಬೆಂಗಳೂರಿಗೆ ಮಾದಕವಸ್ತು ಪೂರೈಕೆ | ಇಬ್ಬರ ಬಂಧನ: 13.5 KG ಹ್ಯಾಶಿಷ್ ಎಣ್ಣೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:17 IST
Last Updated 12 ಆಗಸ್ಟ್ 2024, 15:17 IST
..
..   

ಹೈದರಾಬಾದ್‌: ‘ಹ್ಯಾಶಿಷ್ ಎಣ್ಣೆ’ ಎಂಬ ಮಾದಕ ವಸ್ತುವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಇಬ್ಬರು ಅಂತರರಾಜ್ಯ ಪೆಡ್ಲರ್‌ಗಳನ್ನು  ಭಾನುವಾರ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

‘ವಿಶಾಖಪಟ್ಟಣದಿಂದ ಹೈದರಾಬಾದ್‌ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಒಂದು ಕೋಟಿಗೂ ಹೆಚ್ಚು ಮೌಲ್ಯದ 13.5 ಕೆ.ಜಿ ‘ಹ್ಯಾಶಿಷ್ ಎಣ್ಣೆ’ ಅನ್ನು ಜಪ್ತಿ ಮಾಡಲಾಗಿದೆ’ ಎಂದು ರಾಚಕೊಂಡ ಪೊಲೀಸ್‌ ಕಮಿಷನರ್‌ ಜಿ. ಸುಧೀರ್‌ ಬಾಬು ಅವರು ಸೋಮವಾರ ತಿಳಿಸಿದ್ದಾರೆ.

ವಂಚುರ್ಭಾ ಕೊಂಡ ಬಾಬು(30) ಮತ್ತು ವಂಚುರ್ಭಾ ಬಾಲಕೃಷ್ಣ (20) ಬಂಧಿತ ಆರೋಪಿಗಳು.  ಆರೋಪಿಗಳಿಬ್ಬರು ಆಂಧ್ರಪ್ರದೇಶವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದ್ದಾರೆ. ರೈತರಾಗಿರುವ ಇವರು ಸುಲಭವಾಗಿ ಹಣ ಸಂಪಾದಿಸುವ ಆಸೆಯಿಂದ ಮಾದಕವಸ್ತುಗಳ ಕಳ್ಳ ಸಾಗಾಣಿಕೆ ಜಾಲದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

‘ಆರೋಪಿಗಳು ಆಂಧ್ರಪ್ರದೇಶ ಮತ್ತು ಒಡಿಶಾದಿಂದ ‘ಹ್ಯಾಶಿಷ್ ಎಣ್ಣೆ’ ಅನ್ನು ಸಂಗ್ರಹಿಸಿ,‌ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು  ಮಾಹಿತಿ ನೀಡಿದ್ದಾರೆ.

‘ಇತ್ತೀಚೆಗೆ ಬೆಂಗಳೂರಿನಿಂದ 14 ಕೆ.ಜಿ ‘ಹ್ಯಾಶಿಷ್ ಎಣ್ಣೆ’ಗೆ ಬೇಡಿಕೆ ಬಂದಿತ್ತು. ‘ಹ್ಯಾಶಿಷ್ ಎಣ್ಣೆ‘ ಅನ್ನು ಪೂರೈಸುವ ಸಲುವಾಗಿ ಆರೋಪಿಗಳು ಹೈದರಾಬಾದ್‌ನ ಹೋಟೆಲ್‌ವೊಂದರ ಬಳಿ ಭಾನುವಾರ ಸಂಜೆ ಕಾಯುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಹಯಾತ್‌ ನಗರ ಪೊಲೀಸರನ್ನೊಳಗೊಂಡ ವಿಶೇಷ ಕಾರ್ಯಾಚರಣಾ ಪಡೆಯು ಆರೋಪಿಗಳನ್ನು ಬಂಧಿಸಿದೆ’ ಎಂದು ತಿಳಿಸಿದ್ದಾರೆ. 

‘ಬೆಂಗಳೂರು ಮೂಲದ ಮಾದಕ ವಸ್ತುಗಳ ಖರೀದಿದಾರರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಒಂದು ಕೆ.ಜಿ. ಹ್ಯಾಶಿಷ್ ಎಣ್ಣೆಗೆ 35ರಿಂದ 40 ಕೆ.ಜಿ. ಗಾಂಜಾವನ್ನು ಬಳಸಲಾಗುತ್ತದೆ. ಹೀಗಾಗಿ, 13.5 ಕೆ.ಜಿ. ಹ್ಯಾಶಿಷ್ ಎಣ್ಣೆಗೆ ಅಂದಾಜು 560 ಕೆ.ಜಿ. ಗಾಂಜಾ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.