ADVERTISEMENT

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಸಹಾಯ ಮಾಡಿದ್ದು ಅದೃಶ್ಯ ಗೊರಿಲ್ಲಾ ತಂತ್ರ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 2:19 IST
Last Updated 6 ಜನವರಿ 2019, 2:19 IST
ಕನಕದುರ್ಗಾ ಮತ್ತು ಬಿಂದು
ಕನಕದುರ್ಗಾ ಮತ್ತು ಬಿಂದು   

ತಿರುವನಂತಪುರಂ: ಜನವರಿ 2,2019ರಂದು ಕೇರಳದ ಬಿಂದು ಮತ್ತು ಕನಕದುರ್ಗಾ ಶಬರಿಮಲೆ ದೇಗುಲಕ್ಕೆ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದ ನಂತರ ಹಲವಾರು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರೂ ಪ್ರತಿಭಟನೆಯಿಂದಾಗಿ ದೂರ ಸರಿಯಬೇಕಾಯಿತು. ಡಿಸೆಂಬರ್ 17ರಂದು ನಾಲ್ಕು ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ದೇಗುಲ ಪ್ರವೇಶಕ್ಕೆ ಮುಂದಾದರೂ ಅವರನ್ನು ದಾರಿ ಮಧ್ಯೆ ತಡೆಯಲಾಯಿತು. ಅಂದಹಾಗೆ ಬಿಂದು ಮತ್ತು ಕನಕದುರ್ಗಾ ಡಿಸೆಂಬರ್ 24ರಂದು ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದರು. ಇಷ್ಟೆಲ್ಲಾ ಅಡೆತಡೆಗಳಿರುವಾಗ ಈ ಬಾರಿ ಇವರಿಬ್ಬರೂ ಯಾವುದೇ ಸಮಸ್ಯೆ ಇಲ್ಲದೆ ದೇವಸ್ಥಾನದ ಒಳಗೆ ಪ್ರವೇಶಿಸಿದ್ದು ಹೇಗೆ? ಇದಕ್ಕೆ ಉತ್ತರ ವಿಜ್ಞಾನ ಮತ್ತು ಜನರ ಬೆಂಬಲ!
ಈ ಬಗ್ಗೆ ದಿ ನ್ಯೂಸ್ ಮಿನಿಟ್ ವರದಿ ಇಲ್ಲಿದೆ.

ಅದೃಶ್ಯ ಗೊರಿಲ್ಲಾ ತಂತ್ರ
ಬಿಂದು ಮತ್ತು ಕನಕದುರ್ಗಾ ಶಬರಿಮಲೆ ಪ್ರವೇಶಿಸಬೇಕು ಎಂಬ ಉದ್ದೇಶ ಹೊಂದಿದ್ದು ಇವರಿಬ್ಬರೂ ಆನ್‍ಲೈನ್ ಮೂಲಕ ಪರಿಚಿತರಾಗಿದ್ದರು. ಇವರೊಂದಿಗೆ ಜತೆಯಾಗಿ ನಿಂತ ವ್ಯಕ್ತಿ ಮನೋವಿಜ್ಞಾನಿ ಪ್ರಸಾದ್ ಅಮೋರ್. ಬಯೋ ಮೆಡಿಕಲ್ ಇಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೇಯಸ್ ಕಣಾರನ್ ಎಂಬಾತ ಶುರು ಮಾಡಿದ್ದ ಫೇಸ್‍ಬುಕ್ ಪೇಜ್ ಒಂದರ ಮೂಲಕ ಈ ಮೂರು ಮಂದಿ ಪರಸ್ಪರ ಪರಿಚಿತರಾಗಿದ್ದರು. ಕೋಯಿಕ್ಕೋಡ್‍ನಲ್ಲಿ ವಾಸಿಸುತ್ತಿರುವ ಶ್ರೇಯಸ್,ನವೋತ್ಥಾನ ಕೇರಳಂಶಬರಿಮಲೆಯಿಲೆಕ್ಕ್ ಎಂಬ ಫೇಸ್‍ಬುಕ್ ಪುಟ ಆರಂಭಿಸಿದ್ದು, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದರು.

ADVERTISEMENT

ಬಿಂದು ಮತ್ತು ಕನಕದುರ್ಗಾ ಡಿಸೆಂಬರ್‌ನಲ್ಲಿ ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲವಾದಾಗ ತಾವು ಬೇರೆ ಮಾರ್ಗ ಕಂಡುಕೊಳ್ಳಬೇಕು ಎಂದು ಯೋಚಿಸಿದರು. ಹೀಗೆ ಈ ಬಗ್ಗೆ ಮಾತನಾಡುವಾಗ ತಾವು ಯಾಕೆ ಮನೋವೈಜ್ಞಾನಿಕ ತಂತ್ರ ಬಳಸಬಾರದು ಎಂಬ ಯೋಚನೆ ಬಂದದ್ದು. ಹಾಗಾಗಿ ಅವರು ಈ ದಾರಿಯ ಬಗ್ಗೆ ಚಿಂತನೆ ಆರಂಭಿಸಿದರು.

ಈ ಬಗ್ಗೆ ದಿ ನ್ಯೂಸ್ ಮಿನಿಟ್ ಜತೆ ಮಾತನಾಡಿದ ಅಮೋರ್,ಹಲವಾರು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲರಾದರು. ಕೇರಳ ಸರ್ಕಾರ ಸುಪ್ರೀಂಕೋರ್ಟ್ ತೀರ್ಮಾನವನ್ನು ಒಪ್ಪಿದರೂ ಅದನ್ನು ಅನುಷ್ಠಾನಗೊಳಿಸಲು ಅಡೆತಡೆಗಳನ್ನು ಎದುರಿಸುತ್ತಿದೆ. ಪುರುಷ ಪ್ರಾಬಲ್ಯವನ್ನು ನಾವಿಲ್ಲಿ ಕಾಣುತ್ತಿದ್ದೇವೆ. ತಮ್ಮ ಹಕ್ಕು ಎಂದು ಇಲ್ಲಿ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವಂತಿಲ್ಲ. ಅಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಿಕ್ಕಾಗಿ ಜಮೆಯಾಗಿರುವ ಜನರ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಹಾಗಾಗಿ ಮನೋವೈಜ್ಞಾನಿಕ ರೀತಿಯನ್ನು ಇಲ್ಲಿ ಪಾಲಿಸುವುದು ಅನಿವಾರ್ಯವಾಯಿತು.

ಫೇಸ್‌ಬುಕ್ ಗ್ರೂಪ್‍ ಮೂಲಕ ಪರಿಚಿತರಾದ ಅಮೋರ್, ಶ್ರೇಯಸ್ ಜತೆ ನಿರಂತರಸಂವಹನ ನಡೆಸುತ್ತಲೇ ಇದ್ದರು. ಈ ಇಬ್ಬರು ಮಹಿಳೆಯರು ನನ್ನ ಮೇಲೆ ನಂಬಿಕೆ ಇಟ್ಟರು. ಕೆಲವೊಂದು ಯೋಚನೆಗಳನ್ನು ನಾವು ಪರಸ್ಪರ ಹಂಚಿಕೊಳ್ಳಲೂ ಇಲ್ಲ.
ಮಹಿಳೆಯರು ಶಬರಿಮಲೆಗೆ ಹೋಗುತ್ತಿದ್ದಾರೆ ಎಂದು ಘೋಷಿಸಿದ ಕೂಡಲೇ ಮಾಧ್ಯಮಗಳು ಆ ಮಹಿಳೆಯತ್ತ ಗಮನ ಹರಿಸುತ್ತವೆ. ಅಷ್ಟೊತ್ತಿಗೆ ಅದು ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡುಅಲ್ಲಿಗೆ ಹೋಗುವುದು ಕಷ್ಟವಾಗುತ್ತದೆ. ಹಾಗಾಗಿ ನಾವು ಅದೃಶ್ಯ ಗೊರಿಲ್ಲಾ ರೀತಿ ಅನುಸರಿಸಿದೆವು ಅಂತಾರೆ ಅಮೋರ್.

ಏನಿದು ಅದೃಶ್ಯ ಗೊರಿಲ್ಲಾ ತಂತ್ರ?

ನಾವು ಒಂದು ವಸ್ತುವಿನಲ್ಲಿ ಅಥವಾ ಒಂದು ಕಾರ್ಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿರುವಾಗ ಅಲ್ಲಿ ಇತರ ಚಟುವಟಿಕೆ ನಡೆಯುತ್ತಿರುವುದು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಒಂದು ವೇಳೆ ಅದು ಕಣ್ಣಿಗೆ ಕಾಣಿಸಿಕೊಂಡರೂ ನಾವು ಅದರತ್ತ ಗಮನ ಹರಿಸುವುದಿಲ್ಲ. ಇದೇ ತಂತ್ರವನ್ನು ನಾವು ಶಬರಿಮಲೆಯಲ್ಲಿ ಪ್ರಯೋಗ ಮಾಡಿದೆವು.
ನಾವು (ಬಿಂದು,ಕನಕದುರ್ಗಾ ಮತ್ತು ಅಮೋರ್) ಗುಂಪಿನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದೆವು. ಮಹಿಳೆಯರು ಅಷ್ಟೊಂದು ಸಮಾಧಾನಚಿತ್ತದಿಂದ ಗುಂಪಿನೊಂದಿಗೆ ನಡೆಯುತ್ತಾರೆ ಎಂಬುದು ಯಾರೂ ಊಹಿಸಿರಲ್ಲ.ಹಾಗೊಂದು ವೇಳೆ ಮಹಿಳೆಯರು ದೇವಾಲಯ ಪ್ರವೇಶಿಸುತ್ತಿದ್ದರೆ ಅವರೊಂದಿಗೆ ಪೊಲೀಸರು ಇರುತ್ತಾರೆ ಎಂಬ ಯೋಚನೆ ಎಲ್ಲರಲ್ಲೂ ಇರುತ್ತದೆ. ಇಲ್ಲಿ ಅದು ಹಾಗಿರಲಿಲ್ಲ. ಹೀಗೆ ನಡೆಯುವಾಗ ಮಹಿಳೆಯರು ಹೆದರಬಾರದು. ಯಾವುದೇ ಕಾರಣಕ್ಕೂ ಅವರ ದೈಹಿಕ ಚಲನವಲನಗಳು ಇತರರ ಗಮನ ಸೆಳೆಯುವಂತಿರಬಾರದು. ಈ ಮಹಿಳೆಯರಿಬ್ಬರು ಗಟ್ಟಿಗಿತ್ತಿಯರು. ಶಬರಿಮಲೆ ಪ್ರವೇಶಿಸುವಾಗ ಏನಾದರೂ ಸಮಸ್ಯೆ ಬಂದರೆ ಅದನ್ನು ಎದುರಿಸಲು ಸನ್ನದ್ಧರಾಗಿ ಬಂದವರಾಗಿದ್ದರು. ಹಾಗಾಗಿ ಅವರು ಜನರ ಮಧ್ಯೆ ನಡೆಯುತ್ತಿದ್ದರೂ ಯಾರನ್ನೂ ತಮ್ಮತ್ತ ಸೆಳೆಯುವಂತೆ ಮಾಡಲಿಲ್ಲ.

ವಯಸ್ಸಾದ ಮಹಿಳೆಯರಂತೆ ಕಾಣಲು ಅವರು ಸೀರೆ ಉಡಬಹುದಿತ್ತು. ಆದರೆ ಇವರು ಚೂಡಿದಾರವನ್ನೇ ಆಯ್ಕೆ ಮಾಡಿಕೊಂಡರು. ಚೂಡಿದಾರದಲ್ಲಿ ಅವರು ಯುವತಿಯರಾಗಿಯೇ ಕಾಣುತ್ತಾರೆ. ಹಾಗಿದ್ದರೂ ಅವರು ಗುಂಪಿನೊಂದಿಗೆ ಸಾಗಿ ಸನ್ನಿಧಾನಕ್ಕೆ ತಲುಪಿದರು. ಯಾರೊಬ್ಬರೂ ಅವರನ್ನು ಗಮನಿಸಿಲ್ಲ.ನೀವು ಯಾಕೆ ಇಲ್ಲಿ ಬಂದಿರಿ?ಎಂದು ಯಾರೂ ಅವರನ್ನು ಕೇಳಲಿಲ್ಲ. ಇಷ್ಟೊಂದು ಸಹಜವಾಗಿ ಯಾರೂ ಶಬರಿಮಲೆಗೆ ಪ್ರವೇಶಿಸಲು ಸಾಧ್ಯವಿಲ್ಲ. ಇಲ್ಲಿ ಮನೋವೈಜ್ಞಾನಿಕ ಕುರುಡುತನದಿಂದಾಗಿ ಜನರಿಗೆ ಇವರನ್ನು ಕಾಣಿಸಲಿಲ್ಲ.
ಇದು ಅರಿವಿನ ಒಲವು ಎಂದು ವಿವರಿಸಿದ ಅಮೋರ್. ಮನುಷ್ಯನ ಮೆದುಳು ತಾನು ಯಾವುದನ್ನು ಪದೇ ಪದೇ ನೋಡುತ್ತೇನೋ ಅದನ್ನೇ ಗ್ರಹಿಸುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬರು ಹಿಂಸಾಚಾರಕ್ಕೆ ಸಂಬಂಧಪಟ್ಟ ವಿಷಯವನ್ನೇ ನೋಡುತ್ತಿದ್ದರೆ,ಅಂಥದ್ದೇ ವಿಷಯಗಳು ಆತನ ಕಣ್ಣಿಗೆ ಬೀಳುತ್ತಿರುತ್ತದೆ.

ಜನರ ಗಮನದ ವ್ಯಾಪ್ತಿಗಳು ಭಿನ್ನವಾಗಿರುತ್ತವೆ.ಇತರರ ಗಮನ ನಮ್ಮತ್ತ ಕೇಂದ್ರೀಕರಿಸದಂತೆ ನಾವು ಮಾಡಿದೆವು. ಜನರು ನಮ್ಮ ಫೋಟೋ ಮತ್ತು ವಿಡಿಯೊ ಸೆರೆ ಹಿಡಿದಾಗಲೂ ನಾವು ಸಮಚಿತ್ತರಾಗಿದ್ದೆವು.ನಾವು ಇತರರ ಗಮನ ಸೆಳೆಯಲು ಯತ್ನಿಸಲಿಲ್ಲ. ಹಾಗೆ ಹೋಗುತ್ತಿರುವಾಗ ಶರಂಕುತ್ತಿಯಲ್ಲಿ ತಮಿಳಿಗರೊಬ್ಬರು ಯುವತಿಯರು ಮಲೆ ಹತ್ತುತ್ತಿದ್ದಾರೆ ಎಂದು ಕೂಗಿ ಹೇಳಿದಾಗಲೂ ನಾವು ಅದನ್ನು ನಿರ್ಲಕ್ಷಿಸಿ ಮುಂದೆ ಸಾಗಿದೆವು. ಯಾರಾದರೂ ನಮ್ಮನ್ನು ಗುರುತಿಸಿದಾಗ ನಾವು ಹೆದರಿ ಬೊಬ್ಬೆ ಹಾಕುತ್ತೇವೆ.ಆದರೆ ನಾವು ಅವರನ್ನು ಕಡೆಗಣಿಸಿ ಮುಂದೆ ಹೋದೆವು. ಹಾಗಾಗಿ ಆ ವ್ಯಕ್ತಿಯ ದನಿ ಕೇಳಿಸಲಿಲ್ಲ. ಈ ರೀತಿಯ ಸಂದರ್ಭ ಬಂದರೆ ಏನು ಮಾಡಬೇಕೆಂದು ನಾವು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆವು.

ಏತನ್ಮಧ್ಯೆ,ಮಹಿಳೆಯರು ರಹಸ್ಯವಾಗಿ ಶಬರಿಮಲೆ ಪ್ರವೇಶಿಸಿದರು ಎಂಬ ಮಾಧ್ಯಮಗಳ ವಾದವನ್ನು ಅಮೋರ್ ಅಲ್ಲಗೆಳೆದಿದ್ದಾರೆ.

ಆ್ಯಂಬುಲೆನ್ಸ್ ಬಳಸಿಲ್ಲ
ಅವರು ಆ್ಯಂಬುಲೆನ್ಸ್ ಮೂಲಕ ಅಲ್ಲಿಗೆ ಹೋಗಿದ್ದರು ಎಂಬುದು ತಪ್ಪು.ಅವರು ಗುಂಪಿನ ಜತೆಯೇ ನಡೆದು ಹೋಗಿದ್ದರು. ಅವರು ಅಲ್ಲಿ ಕಣ್ಣು ಮುಚ್ಚಾಲೆ ಆಡಿಲ್ಲ. ನಮ್ಮ ಬಳಿ ವಿಡಿಯೊ ದಾಖಲೆಗಳಿವೆ. ದರ್ಶನ ಮುಗಿದ ನಂತರ ನಾವು ಟೀ ಅಂಗಡಿಗೆ ಹೋಗಿ ಶರಬತ್ತು ಕುಡಿದಿದ್ದೆವು. ಅವರು ಮಹಿಳೆಯರ ಶೌಚಾಲಯವನ್ನೇ ಬಳಸಿದ್ದರು. ಅಂದಹಾಗೆ ಜನರ ಗುಂಪಿನಲ್ಲಿ ನಡೆದುದ್ದಕ್ಕೇ ಇದು ಸಾಧ್ಯವಾಯಿತು. ಮಹಿಳೆಯರು ಹಿಂಬಾಗಿಲ ಮೂಲಕವಾಗಲೀ,ವಿಐಪಿ ಪ್ರವೇಶ ದ್ವಾರದ ಮೂಲಕವಾಗಲೀ ಪ್ರವೇಶಿಸಿಲ್ಲ.
ಅಲ್ಲಿಗೆ ಬಂದಿದ್ದ ಭಕ್ತರ ಮನದಲ್ಲಿ ದೇವರ ದರ್ಶನ ಒಂದೇ ಉದ್ದೇಶವಾಗಿತ್ತು. ಹಾಗಾಗಿ ಅವರು ಅವರ ಜತೆಯಲ್ಲಿಯೇ ಇದ್ದ ಮಹಿಳೆಯರತ್ತ ಗಮನ ಹರಿಸಿಲ್ಲ.

ಇದು ಯಾವ ರೀತಿ ಅಂದರೆನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಹಲವಾರು ವ್ಯಕ್ತಿಗಳ ಮುಖಗಳನ್ನು ನೋಡಿರುತ್ತೇವೆ. ಆದರೆ ಯಾವ ಮುಖವೂ ನಮ್ಮ ನೆನಪಿನಲ್ಲಿ ಉಳಿದಿರುವುದಿಲ್ಲ. ಅದೇ ವೇಳೆ ಕುಡುಕನೊಬ್ಬ ಅಲ್ಲಿ ಬಂದು ಗಲಾಟೆ ಮಾಡಿದರೆ ನಮಗೆ ಆ ಮುಖ ನೆನಪಿರುತ್ತದೆ. ಯಾಕೆಂದರೆ ನಾವು ಆತನನ್ನು ಗಮನಿಸುತ್ತೇವೆ.ಅಯ್ಯಪ್ಪ ದರ್ಶನಕ್ಕೆ ಜನರ ಗುಂಪು ಜಾಸ್ತಿ ಇದ್ದರೂ ಅವರು ದರ್ಶನ ಮಾಡಿ ಬಂದರು.

ಪೊಲೀಸರ ಸಹಾಯ ಇತ್ತು
ಅಮೋರ್ ಇದೇ ಮೊದಲ ಬಾರಿ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಇವರು ಮೂವರ ಜತೆ ನಾಲ್ವರು ಪೊಲೀಸರು ಮಫ್ತಿಯಲ್ಲಿದ್ದರು. ಈ ಪೊಲೀಸರು ಸ್ವಲ್ಪ ದೂರದಲ್ಲಿಯೇ ಇರುತ್ತಿದ್ದರು. ಈ ಪೊಲೀಸರು ಅಲ್ಲಿನ ಸ್ಥಳೀಯ ಪೊಲೀಸರು ಆಗಿರಲಿಲ್ಲ.
ಈ ಹಿಂದೆ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವಾಗ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸೋರಿಕೆ ಮಾಡಿದ್ದರು.ಇದರಿಂದಾಗಿ ಪ್ರತಿಭಟನಾಕಾರರು ಅಲ್ಲಿ ಜಮಾಯಿಸಿದ್ದರು.
ಈ ರೀತಿ ಮಾಹಿತಿ ಸೋರಿಕೆ ಮಾಡುವ ಪೊಲೀಸ್ ಅಧಿಕಾರಿಗಳು ಮಹಿಳೆಯರ ಪ್ರವೇಶ ನಿಷೇಧಿಸುವವರಾಗಿದ್ದಾರೆ.ಹಾಗಾಗಿ ನಮ್ಮ ಜತೆಗಿದ್ದ ಪೊಲೀಸರು ಬೇರೆ ಜಿಲ್ಲೆಯವರಾಗಿದ್ದರು. ಇಲ್ಲದೇ ಇದ್ದರೆ,ಈ ಬಾರಿಯೂ ನಮ್ಮ ಯೋಜನೆ ಸೋರಿಕೆಯಾಗುತ್ತಿತ್ತು. ಕನಕ ಮತ್ತು ಬಿಂದು ದೇವರ ದರ್ಶನ ಪಡೆದ ನಂತರವೇ ಪತ್ತನಂತಿಟ್ಟ ಪೊಲೀಸರಿಗೆ ಈ ವಿಷಯ ಗೊತ್ತಾಗಿದ್ದು ಅಂತಾರೆ ಅಮೋರ್.

ಈ ಕಾರ್ಯತಂತ್ರದಲ್ಲಿ ನೀವು ಯಾಕೆ ಭಾಗಿಯಾಗಿದ್ದು ಎಂದು ಕೇಳಿದಾಗ ಡಾ. ಅಮೋರ್ ನೀಡಿದ ಉತ್ತರ ಹೀಗಿದೆ.
'ನಾನೊಬ್ಬ ಸಾಹಸಿ.ನಾನು ಯಾತ್ರೆ ಮಾಡಲು ಮತ್ತು ಸವಾಲುಗಳನ್ನು ಎದುರಿಸಲು ಇಷ್ಟ ಪಡುತ್ತೇನೆ. ಸುಪ್ರೀಂಕೋರ್ಟ್ ನ ತೀರ್ಪು ಅನುಷ್ಠಾನವಾಗಬೇಕೆಂದು ನಾನು ಬಯಸಿದ್ದೆ. ಅದು ಹಿಂಸೆಯ ರೀತಿಯಲ್ಲಾಗಿರಬಾರದು. ನಾನು ಲಿಂಗ ಸಮಾನತೆ ಬಗ್ಗೆ ವಿಶ್ವಾಸ ಹೊಂದಿದ್ದು. ಸಂವಿಧಾನ ಮಹಿಳೆಗೆ ನೀಡಿರುವ ಹಕ್ಕು ಅವರಿಗೆ ಸಿಗಬೇಕೆಂದು ವಾದಿಸುವವನು. ಸಂವಿಧಾನವನ್ನು ನಾನು ಗೌರವಿಸುತ್ತೇನೆ.'

ಶಬರಿಮಲೆಗೆ ಪ್ರವೇಶಿಸುವ ಮುನ್ನ ತಮ್ಮ ತಂಡ ಪೊಲೀಸರ ಸಹಾಯದಿಂದ ಇಲ್ಲಿ ಪ್ರಯೋಗ ಮಾಡಿದ್ದೆವು. ಇಲ್ಲಿ ಅಧಿಕೃತವಾಗಿ ಯಾವುದೇ ಪೊಲೀಸ್ ರಕ್ಷಣೆ ಇಲ್ಲ ಮತ್ತು ಅಲ್ಲಿರುವವರಿಗೆ ಈ ಬಗ್ಗೆ ಅರಿವು ಕೂಡಾ ಇಲ್ಲ ಎಂಬುದು ಗೊತ್ತಾಯಿತು.
ಈ ಪ್ರಯೋಗದ ಮೂಲಕ ಭಕ್ತರು ಯಾವ ರೀತಿ ಸಾಗುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳು ಯಾವುದು? ಜನರು ಎಲ್ಲಿ ವಿಶ್ರಾಂತಿ ಪಡೆಯುತ್ತಾರೆ ಮತ್ತು ಈ ರೀತಿ ಮಲೆ ಹತ್ತುವಾಗ ಅವರು ಯಾವ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಎಂಬುದನ್ನು ನಾವು ಗಮನಿಸಿದ್ದೆವು.

ಬಿಂದು ಮತ್ತು ಕನಕದುರ್ಗಾ ಅವರು ಈ ಪ್ರಯಾಣ ಆರಂಭ ಮಾಡುವ ಮುನ್ನ ಗುಪ್ತ ಸ್ಥಳವೊಂದರಲ್ಲಿ ತಂಗಿದ್ದರು. ರಾತ್ರಿ1.30ಕ್ಕೆ ಇವರಿಬ್ಬರೂ ಪ್ರಯಾಣ ಆರಂಭಿಸಿದ್ದರು. ಅಮೋರ್ ತ್ರಿಶ್ಶೂರಿನಿಂದ ಬಂದಿದ್ದರು.
ತಮ್ಮ ಯೋಜನೆ ಯಶಸ್ವಿಯಾಗಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದ ಡಾ.ಅಮೋರ್, ಇಂಥಾ ಪ್ರಗತಿಪರ ನಡೆಯ ಮೂಲಕ ಪುರುಷ ಪ್ರಾಬಲ್ಯವನ್ನು ಮೀರಿ ನಿಷೇಧವನ್ನು ಮುರಿದಿರುವುದರ ಬಗ್ಗೆ ತೃಪ್ತಿ ಇದೆ. ಇದು ಮಹಿಳೆಯರ ಗೆಲುವು ಎಂದಿದ್ದಾರೆ.

ಜತೆಯಾಗಿ ನಿಂತರು
ಕನಕ ಮತ್ತು ಬಿಂದು ಶಬರಿಮಲೆಗೆ ತಲುಪಲು ಜಾನ್ಸನ್ ಎಂಬ ವ್ಯಕ್ತಿಯ ಸಹಾಯವೂ ಇತ್ತು. ದರ್ಶನ ಮುಗಿಸಿ ಈ ಇಬ್ಬರು ಮಹಿಳೆಯರು ಎರ್ನಾಕುಳಂನಲ್ಲಿರುವ ಜಾನ್ಸನ್ ಮನೆಗೆ ಬಂದು ವಿಶ್ರಾಂತಿ ಪಡೆದಿದ್ದರು.
ಈ ಮಹಿಳೆಯರಿಗೆ ಶಬರಿಮಲೆ ಹತ್ತಲು ಬೆಂಬಲ ನೀಡಿದ್ದು ಯಾಕೆ ಎಂದು ಜಾನ್ಸನ್ ಅವರಲ್ಲಿ ಕೇಳಿದಾಗ,ಅವರಿಗೆ ದೃಢ ನಿಲುವು ಇತ್ತು ಮತ್ತು ಪ್ರಾಮಾಣಿಕ ವ್ಯಕ್ತಿಗಳು ಎಂದು ತಿಳಿಯಿತು ಎಂದು ಉತ್ತರಿಸಿದ್ದಾರೆ.
ಜಾನ್ಸನ್ ಮತ್ತು ಬಿಂದು ನಡುವೆ ಹಲವಾರು ಮಂದಿ ಮ್ಯೂಚುವಲ್ ಫ್ರೆಂಡ್ಸ್ ಇದ್ದರೂ ಶಬರಿಮಲೆ ಪ್ರವೇಶ ಮುನ್ನ ಇವರಿಬ್ಬರೂ ಪರಸ್ಪರ ಪರಿಚಿತರಾಗಿರಲಿಲ್ಲ. ಡಿಸೆಂಬರ್‌ನಲ್ಲಿ ದೇವಾಲಯ ಪ್ರವೇಶ ಯತ್ನ ವಿಫಲವಾದ ಬಳಿಕ ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಈ ಮಹಿಳೆಯರು ದಾಖಲಾದಾಗ ಜಾನ್ಸನ್ ಅಲ್ಲಿ ಭೇಟಿಯಾಗಿದ್ದರು.
ಈ ಹಿಂದೆ ಕೆಲವು ಕಾರ್ಯಕ್ರಮದಲ್ಲಿ ನಾವು ಪರಸ್ಪರ ನೋಡಿದ್ದೇವೆ ಆದರೆ ನಾವು ಗೆಳೆಯರಾಗಲಿಲ್ಲ. ಕೋಟ್ಟಯಂನಲ್ಲಿ ನಾನು ಕನಕದುರ್ಗ ಅವರನ್ನು ಭೇಟಿಯಾಗಿದ್ದೆ. ಆನಂತರ ಬಿಂದು ನನಗೆ ಕರೆ ಮಾಡಿದ್ದರು .ಶಬರಿಮಲೆಯಲ್ಲಿ ಮಹಿಳೆಯರು ಪ್ರಾರ್ಥಿಸಿದರೆ ದೇವಸ್ಥಾನಕ್ಕಾಗಲೀ ನಂಬಿಕೆಗಾಗಲೀ ಧಕ್ಕೆಯಾಗುವುದಿಲ್ಲ. ಮಹಿಳೆಯರು ದೇವಾಲಯ ಪ್ರವೇಶಿಸುವುದರ ಬಗ್ಗೆ ಭಕ್ತರಿಗೆ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಸಂಘ ಪರಿವಾರ ಮತ್ತು ನಾಯರ್ ಸರ್ವೀಸ್ ಸೊಸೈಟಿಗೆ ಮಾತ್ರ.ನನಗೆ ಯಾವುದೇ ಭಯವಿಲ್ಲ. ಸಂಘ ಪರಿವಾರದ ಬಗ್ಗೆ ಕೇರಳದವರಿಗೆ ಭಯವಿಲ್ಲ. ಕಳೆದ ಗುರುವಾರ ಸಂಘ ಪರಿವಾರದ ವಿರುದ್ಧ ಪ್ರತಿಭಟಿಸಲು ಅವರು ರಸ್ತೆಗೆ ಇಳಿದಿಲ್ಲವೇ? ಅಂತಾರೆ ಜಾನ್ಸನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.