ADVERTISEMENT

IQAir Report 2023: ಭಾರತದ ಈ ನಗರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಕಳಪೆ ವಾಯುಗುಣ

ಕಳಪೆ ವಾಯುಗುಣ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಪಿಟಿಐ
Published 19 ಮಾರ್ಚ್ 2024, 3:17 IST
Last Updated 19 ಮಾರ್ಚ್ 2024, 3:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸ್ವಿಟ್ಜರ್‌ಲ್ಯಾಂಡ್ ಮೂಲದ IQAir ಎಂಬ ಸಂಸ್ಥೆ 2023ರ ಜಾಗತಿಕ ವಾಯು ಗುಣಮಟ್ಟ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು ಆ ವರದಿಯು ಭಾರತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆತಂಕಕಾರಿ ಮಾಹಿತಿಗಳನ್ನು ಹೊರಗೆಡವಿದೆ.

ವರದಿಯ ಪ್ರಕಾರ ದೆಹಲಿಯು ಜಗತ್ತಿನಲ್ಲಿಯೇ ಅತ್ಯಂತ ಕಳಪೆ ವಾಯು ಗುಣಮಟ್ಟವನ್ನು ಹೊಂದಿರುವ ರಾಜಧಾನಿ ನಗರವಾಗಿದೆ.

ADVERTISEMENT

ಅದೇ ಪ್ರಕಾರ ಜಗತ್ತಿನ ಅತ್ಯಂತ ಕಳಪೆ ವಾಯುಗುಣ ಹೊಂದಿದ ನಗರವನ್ನೂ ಭಾರತದಲ್ಲಿಯೇ ಗುರುತಿಸಿದ್ದು ಅದರ ಕಳಂಕ ಬಿಹಾರದ ಬೇಗುಸರಾಯ್ ನಗರಕ್ಕೆ ಸಂದಿದೆ. ಬೇಗುಸರಾಯ್ ಬಿಹಾರದ ಆರ್ಥಿಕ, ಕೈಗಾರಿಕಾ ರಾಜಧಾನಿ ಎಂದು ಗುರುತಿಸಲಾಗುತ್ತದೆ.

ವಿಚಿತ್ರ ಎಂದರೆ IQAir ಸಂಸ್ಥೆ 2022ರಲ್ಲಿ ನೀಡಿದ್ದ ವರದಿಯಲ್ಲಿ ಬೇಗುಸರಾಯ್ ಯಾವುದೇ ಸ್ಥಾನ ಪಡೆದಿರಲಿಲ್ಲ.

ವರದಿ ಅಭ್ಯಸಿಸಿದ 134 ದೇಶಗಳಲ್ಲಿ ಭಾರತ ಕಳಪೆ ವಾಯುಗುಣ ಹೊಂದಿರುವ ಮೂರನೇ ಪ್ರಮುಖ ದೇಶ ಎಂದು ಗುರುತಾಗಿದೆ. ಬಾಂಗ್ಲಾದೇಶ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿನ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 53.3 ಮೈಕ್ರೊಗ್ರಾಮ್ ಪಿಎಂ (particulate matter) ಪ್ರಮಾಣವನ್ನು ಗುರುತಿಸಲಾಗಿದೆ. ಬಾಂಗ್ಲಾದೇಶ 79.9 ಮೈಕ್ರೊಗ್ರಾಮ್ ಪಿಎಂ, ಪಾಕಿಸ್ತಾನ 73.7 ಮೈಕ್ರೊಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿವೆ.

ಬೇಗುಸರಾಯ್ 118.9 ಮೈಕ್ರೊಗ್ರಾಮ್ ಪಿಎಂ ಪ್ರಮಾಣವನ್ನು ಹೊಂದುವ ಮೂಲಕ ಜಗತ್ತಿನಲ್ಲಿಯೇ ಅತಿ ಕಳಪೆ ವಾಯುಗುಣವನ್ನು ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ದೆಹಲಿ 89.1 ಮೈಕ್ರೊಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿದೆ. ಈ ಮೂಲಕ ಸತತವಾಗಿ ನಾಲ್ಕು ವರ್ಷದಿಂದ ಅತೀ ಕಳಪೆ ವಾಯುಗುಣ ಹೊಂದಿರುವ ರಾಜಧಾನಿ ನಗರ ಎಂಬ ಕುಖ್ಯಾತಿಯನ್ನು ಅದು ಅಂಟಿಸಿಕೊಂಡಿದೆ.

ಅತ್ಯಂತ ಉತ್ತಮ ವಾಯುಗುಣದ ಪಿಎಂ ಪ್ರಮಾಣ 2.5 ಮೈಕ್ರೊಗ್ರಾಮ್ ಕೆಳಗಿನದ್ದು. ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವುದು.

ಭಾರತದಲ್ಲಿ ಶೇ 66ರಷ್ಟು ನಗರಗಳು ಸರಾಸರಿ 35 ಮೈಕ್ರೊಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿವೆ ಎಂದು ವರದಿ ಹೇಳಿದೆ. ಭಾರತದ 136 ಕೋಟಿ ಜನಸಂಖ್ಯೆಯಲ್ಲಿ ಶೇ 96ರಷ್ಟು ಜನ ಕಳಪೆ ಹವಾಗುಣದಿಂದ ಭಾದಿತರಾಗಿದ್ದಾರೆ ಎಂದು ಹೇಳಿದೆ.

IQAir ಸಂಸ್ಥೆ ಈ ವರದಿ ಸಿದ್ದಪಡಿಸಲು ಜಾಗತಿಕವಾಗಿ 30,000 ವಾಯುಗುಣಮಟ್ಟ ತಪಾಸಣಾ ಕೇಂದ್ರಗಳು, ಮಾಲಿನ್ಯಕ್ಕೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು, ಎನ್‌ಜಿಒ ಹಾಗೂ ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರಗಳನ್ನು ಬಳಸಿಕೊಂಡು ವರದಿ ಸಿದ್ದಪಡಿಸಿದೆ.

ಕಳಪೆ ವಾಯುಗುಣವು ಮನುಷ್ಯರ ಸಾವಿಗೆ ಈಚಿನ ವರ್ಷಗಳಲ್ಲಿ ಪ್ರಮುಖ ಕಾರಣವಾಗಿ ಹೊಮ್ಮಿದೆ. ಇದೇ ಕಾರಣಕ್ಕೆ ಜಾಗತಿಕವಾಗಿ ಪ್ರತಿ ವರ್ಷ ಸುಮಾರು 70 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಕಳಪೆ ವಾಯುಗುಣವು ಅಸ್ತಮಾ, ಶ್ವಾಸಕೋಶ ಸಬಂಧಿ ಕಾಯಿಲೆಗಳು, ಕ್ಯಾನ್ಸರ್, ಸ್ಟ್ರೋಕ್, ಮಾನಸಿಕ ಅನಾರೋಗ್ಯ ಅಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.

particulate matter ಎನ್ನುವುದು ಗಾಳಿಯಲ್ಲಿನ ಬರಿಗಣ್ಣಿಗೆ ಗೋಚರವಾಗದ ಧೂಳಿನ ಕಣ, ಇತರ ವಿಷಕಾರಿ ಅಂಶಗಳನ್ನು ಗುರುತಿಸಲು ಇರುವ ಮಾನದಂಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.