ನವದೆಹಲಿ:ಐಆರ್‌ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ ರಾಬ್ಡಿದೇವಿ ಹಾಗೂ ಇತರ ಎಲ್ಲ ಆರೋಪಿತರಿಗೆ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಮತ್ತು ಲಾಲು ಪ್ರಸಾದ್ ಪುತ್ರ ತೇಜಸ್ವಿ ಯಾದವ್ ಸೇರಿದಂತೆ ಎಲ್ಲಾ ಆರೋಪಿತರಿಗೆ ಜಾಮೀನು ನೀಡಿದೆ. ₹ 1ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಪಡೆದು ಜಾಮೀಜು ಮಂಜೂರು ಮಾಡಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ರಂದು ನಡೆಸಲಿದೆ.
ವಿಶೇಷ ನ್ಯಾಯಾಧೀಶ ಅರುಣ್ ಭರದ್ವಾಜ್ ಅವರು ಪ್ರಕರಣದ ಆರೋಪಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ಗೆ ಜಾಮೀನು ನೀಡದೆ, ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ಮೇವು ಹಗರಣದ ತಪ್ಪಿತಸ್ಥರಾಗಿರುವ ಲಾಲು ಪ್ರಸಾದ್ ಈಗ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದ್ದರಿಂದ, ಲಾಲು ಇಂದು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.
ನ್ಯಾಯಾಲಯದ ಆದೇಶದಂತೆ ಇಂದು ಬೆಳಿಗ್ಗೆ ರಾಬ್ಡಿದೇವಿ ಹಾಗೂ ತೇಜಸ್ವಿ ಯಾದವ್ ನ್ಯಾಯಾಲಯಕ್ಕೆ ಹಾಜರಾದರು.
ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿದೇವಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿ ಸಲ್ಲಿಸಿತ್ತು.
ಲಾಲು ಪ್ರಸಾದ್ ಮತ್ತು ಅವರ ಮಗ ತೇಜಸ್ವಿ ಯಾದವ್, ಪಕ್ಷದ ಮುಖಂಡ ಪಿ.ಸಿ. ಗುಪ್ತಾ ಮತ್ತು ಅವರ ಪತ್ನಿ ಸರಳಾ ಗುಪ್ತಾ, ಲಾರಾ ಪ್ರಾಜೆಕ್ಟ್ಸ್ ಕಂಪನಿ ಹಾಗೂ ಇತರ ಹತ್ತು ಜನರ ವಿರುದ್ಧ ಇದೇ ಮೊದಲ ಬಾರಿ ಇ.ಡಿ. ಆರೋಪ ಪಟ್ಟಿ ಸಲ್ಲಿಸಿತ್ತು.
ಲಾಲು ಪ್ರಸಾದ್ ಹಾಗೂ ಐಆರ್‌ಸಿಟಿಸಿಯ ಕೆಲವು ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು, ಲಂಚ ಮತ್ತು ಇತರೆ ಲಾಭಗಳನ್ನು ಪಡೆದು ಪುರಿ ಮತ್ತು ರಾಂಚಿಯಲ್ಲಿ ಸುಜಾತಾ ಹೋಟೆಲ್ ಪ್ರೈ ಲಿಮಿಟೆಡ್‌ಗೆ ಹೋಟೆಲ್‌ಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ. ಸಿಬಿಐ ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಇ.ಡಿ, ಲಾಲು ಪ್ರಸಾದ್ ಮತ್ತು ಕುಟುಂಬ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಯುಪಿಎ–1 ಸರ್ಕಾರದಲ್ಲಿ ಲಾಲು ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿರುವ ರೈಲ್ವೆಯ ಮಾಲೀಕತ್ವದ ಬಿಎನ್‌ಆರ್ ಹೋಟೆಲ್‌ಗಳ ನಿಯಂತ್ರಣವನ್ನು ವಿನಯ್ ಮತ್ತು ವಿಜಯ್ ಕೊಚ್ಚರ್ ಅವರ ಮಾಲೀಕತ್ವದ ಸುಜಾತಾ ಹೋಟೆಲ್ ಪ್ರೈ.ಲಿ. ಎಂಬ ಕಂಪನಿಗೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪಟ್ನಾದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಬೆಲೆಬಾಳುವ ಮೂರು ಎಕರೆ ಜಮೀನನ್ನು ಬೇನಾಮಿ ಕಂಪನಿ ಡಿಲೈಟ್ ಮಾರ್ಕೆಟಿಂಗ್‌ಗೆ ನೀಡಲಾಗಿತ್ತು.
ಈ ಹಗರಣ ಸಂಬಂಧ ಲಾಲು, ರಾಬ್ಡಿ ದೇವಿ ಮತ್ತು ಮಗ ತೇಜಸ್ವಿ ಯಾದವ್ ಹಾಗೂ ಕೇಂದ್ರದ ಮಾಜಿ ಸಚಿವ ಪ್ರೇಮ್‌ಚಂದ್ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಹೋಟೆಲ್ ಗುತ್ತಿಗೆ ಪ್ರಕ್ರಿಯೆ ಮುಗಿದ ಮರು ಕ್ಷಣವೇ, ಡಿಲೈಟ್ ಮಾರ್ಕೆಂಟಿಂಗ್ ಕಂಪನಿ ಮಾಲೀಕತ್ವವು ಸರಳಾ ಗುಪ್ತಾ ಅವರಿಂದ ರಾಬ್ಡಿದೇವಿ ಮತ್ತು ಪುತ್ರ ತೇಜಸ್ವಿ ಅವರ ಹೆಸರಿಗೆ 2010ರಿಂದ 2014ರ ಅವಧಿಯಲ್ಲಿ ವರ್ಗವಾಗಿತ್ತು.
ಐಆರ್‌ಸಿಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗೋಯಲ್, ಸುಜಾತಾ ಹೋಟೆಲ್ಸ್ ನಿರ್ದೇಶಕರು ಮತ್ತು ಚಾಣಕ್ಯ ಹೋಟೆಲ್ಸ್ ಮಾಲೀಕರಾದ ವಿಜಯ್ ಮತ್ತು ವಿನಯ್ ಕೊಚ್ಚರ್ ಸಹ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.