ನವದೆಹಲಿ: ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್ ಖರೀದಿಸಲು ಉದ್ದನೇಯ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
ರೈಲ್ವೆ ಇಲಾಖೆಯ ’ಯುಟಿಎಸ್’ ಮೊಬೈಲ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೇ ಖರೀದಿಸಬಹುದು. ದೇಶದಾದ್ಯಂತ ನವೆಂಬರ್ 1ರಿಂದ ಈ ಸೌಲಭ್ಯ ದೊರೆಯಲಿದೆ.
ನಾಲ್ಕು ವರ್ಷಗಳ ಹಿಂದೆ ಪ್ರಮುಖ ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿತ್ತು. ಅತಿ ಹೆಚ್ಚು ಪ್ರಯಾಣಿಕರು ಸ್ಥಳೀಯವಾಗಿ ಸಂಚರಿಸುವ ಮುಂಬೈನಲ್ಲಿ ಮೊದಲು ಈ ಸೌಲಭ್ಯ ಜಾರಿಗೊಳಿಸಲಾಗಿತ್ತು. ಮುಂಬೈ ಬಳಿಕ ದೆಹಲಿ, ಪಲವಲ್ ಮತ್ತು ಚೆನ್ನೈ ನಗರಗಳಲ್ಲಿ ಆರಂಭಿಸಲಾಯಿತು. ಆದರೆ, ಮುಂಬೈ ಹೊರತುಪಡಿಸಿ ಉಳಿದೆಡೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ.
ಸದ್ಯ ರೈಲ್ವೆ ಇಲಾಖೆ ತನ್ನ ವ್ಯಾಪ್ತಿಯ 15 ವಲಯಗಳಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ ಮತ್ತು ಪಶ್ಚಿಮ ಮಧ್ಯ ರೈಲ್ವೆ ವಲಯಗಳಲ್ಲಿ ಮಾತ್ರ ಇನ್ನೂ ಜಾರಿಯಾಗಿಲ್ಲ.
‘ಇದುವರೆಗೆ ಹಲವು ವಲಯಗಳನ್ನು ಈ ಆ್ಯಪ್‌ನಲ್ಲಿ ಸೇರಿಸಿರಲಿಲ್ಲ. ಇದರಿಂದ, ಬೇರೆ ಬೇರೆ ವಲಯಗಳ ವ್ಯಾಪ್ತಿಯ ಸ್ಥಳಗಳ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಶೀಘ್ರದಲ್ಲೇ ಎಲ್ಲ ವಲಯಗಳನ್ನು ಸೇರಿಸಿ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ನವೆಂಬರ್ 1ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಯಾಗುವುದರಿಂದ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ 45 ಲಕ್ಷ ಮಂದಿ ನೋಂದಾಯಿತ ಬಳಕೆದಾರರು ಈ ಆ್ಯಪ್ ಉಪಯೋಗಿಸಿದ್ದು, ಸರಾಸರಿ ಪ್ರತಿದಿನ 87ಸಾವಿರ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ರೈಲ್ವೆ ಇಲಾಖೆ ಈ ರೀತಿ ಆನ್‌ಲೈನ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಮಾರಾಟ ಮಾಡಿ
ಪ್ರತಿ ದಿನ ₹45 ಲಕ್ಷ ಆದಾಯ ಗಳಿಸುತ್ತಿದೆ.
ಒಂದು ಬಾರಿ ನಾಲ್ವರಿಗೆ ಟಿಕೆಟ್
ರೈಲ್ವೆ ನಿಲ್ದಾಣದಿಂದ 25ರಿಂದ 30 ಮೀಟರ್ ದೂರದಲ್ಲಿದ್ದರೆ ಮಾತ್ರ ಪ್ರಯಾಣಿಕರು ಯುಟಿಎಸ್ ಮೊಬೈಲ್ ಆ್ಯಪ್ ಬಳಸಬಹುದು ಮತ್ತು ಒಂದು ಬಾರಿ ನಾಲ್ಕು ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು.
ಟಿಕೆಟ್‌ಗಳು ಮಾತ್ರವಲ್ಲದೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ತಿಂಗಳ ಪಾಸ್‌ಗಳನ್ನು ಸಹ ಖರೀದಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.