ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಈ ವರ್ಷದ ನಡೆದಿದ್ದ ನೀಟ್ (ಯುಜಿ) ಪರೀಕ್ಷೆ, ಫಲಿತಾಂಶದಲ್ಲಿನ ದೋಷಗಳ ಕುರಿತು ಅಭ್ಯರ್ಥಿಗಳು ಮತ್ತು ಅವರ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಾರಿ ನೀಟ್ ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯವೂ ಕೇಳಿಬಂದಿದೆ.
ಪ್ರಶ್ನೆಪತ್ರಿಕೆ ಸೋರಿಕೆ, ಕೃಪಾಂಕದ ಅಸಮರ್ಪಕ ಹಂಚಿಕೆ, ಪರೀಕ್ಷಾ ನಕಲು ಸೇರಿದಂತೆ ವಿವಿಧ ಆರೋಪಗಳನ್ನು ಮಾಡಿರುವ ಅಭ್ಯರ್ಥಿಗಳು ಕಾನ್ಪುರ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಅಭ್ಯರ್ಥಿಗಳಿಗಷ್ಟೇ ಹೆಚ್ಚು ಅಂಕಗಳು ಹೇಗೆ ಬಂದವು? ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ ದೇಶದಾದ್ಯಂತ 67 ಅಭ್ಯರ್ಥಿಗಳು ಪ್ರಥಮ ರ್‍ಯಾಂಕ್ ಹಂಚಿಕೊಳ್ಳಲು ಹೇಗೆ ಸಾಧ್ಯವಾಯಿತು? ಇವೆಲ್ಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆಕಾಂಕ್ಷಿಗಳು ದೂರಿದ್ದಾರೆ.
ನೀಟ್ ಆಕಾಂಕ್ಷಿಗಳ ಹೋರಾಟಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್, ‘ನೀಟ್ ಅಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದೆ.
‘ಬಿಜೆಪಿ ಸರ್ಕಾರವು ಯುವ ಸಮುದಾಯವನ್ನು ವಂಚಿಸುವ ಮೂಲಕ ಅವರ ಭವಿಷ್ಯದ ಜತೆ ಆಟವಾಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ, ಭ್ರಷ್ಟಾಚಾರಗಳು ನಡೆದಿವೆ. ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ. ಬಿಜೆಪಿಯು ದೇಶದ ಯುವ ಜನರಿಗೆ ಮೋಸ ಮಾಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೀಟ್ ಅಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ತರಾಟೆಗೆ ತೆಗೆದುಕೊಂಡಿದ್ದು, ಪರೀಕ್ಷಾ ಆಕಾಂಕ್ಷಿಗಳ ಕಾನೂನುಬದ್ಧ ದೂರುಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.
ಈ ವರ್ಷದ ನೀಟ್ ಪರೀಕ್ಷೆ ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾ ಸಮಯ ನಷ್ಟ, ಕೃಪಾಂಕ ನೀಡಿಕೆ ಸೇರಿದಂತೆ ವಿವಿಧ ವಿಷಯಗಳು ಗೊಂದಲಕ್ಕೆ ಎಡೆಮಾಡಿಕೊಟ್ಟಿವೆ.
* ಮೇ 5ರಂದು ದೇಶದಾದ್ಯಂತ ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಎನ್‌ಟಿಎ ಅಲ್ಲಗಳೆದಿದೆಯಾದರೂ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಬಂಧಿಸಿರುವುದಾಗಿ ಬಿಹಾರ ಪೊಲೀಸರು ಹೇಳಿದ್ದಾರೆ.
* ಉತ್ತರ ಭಾರತದ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಹಿಂದಿ ಮಾಧ್ಯಮ ಪ್ರಶ್ನೆಪತ್ರಿಕೆ ಕೊಡುವ ಬದಲು ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿತ್ತು. ಬಳಿಕ ಸರಿಯಾದ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಪ್ರತಿಗಳನ್ನು ವಿತರಿಸಲಾಯಿತು. ಇದರಿಂದ ಪರೀಕ್ಷಾರ್ಥಿಗಳ ಅಮೂಲ್ಯ ಪರೀಕ್ಷಾ ಸಮಯ ವ್ಯರ್ಥವಾಯಿತು. ಇದರಿಂದಾಗಿ ಪರೀಕ್ಷೆಯನ್ನು ಪೂರ್ಣವಾಗಿ ಬರೆಯಲು ಸಾಧ್ಯವಾಗಲಿಲ್ಲ ಎಂದು ಅಭ್ಯರ್ಥಿಗಳು ನೋವು ತೋಡಿಕೊಂಡಿದ್ದರು. ಅಲ್ಲದೆ, ಈ ಲೋಪಕ್ಕೆ ತಮಗೆ ಪರಿಹಾರ ಒದಗಿಸಬೇಕು ಎಂದು ಕೆಲ ಅಭ್ಯರ್ಥಿಗಳು ಆಗ್ರಹಿಸಿ, ನ್ಯಾಯಾಲಯದ ಮೊರೆಹೋಗಿದ್ದರು.
* ಭೌತವಿಜ್ಞಾನದ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಯೊಂದರ ಕೀ ಉತ್ತರ ಸಮರ್ಪಕವಾಗಿಲ್ಲ ಎಂದು ಹಲವು ಅಭ್ಯರ್ಥಿಗಳು ಎನ್‌ಟಿಎಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು.
* ಇದರ ಬೆನ್ನಲ್ಲೇ ನೀಟ್ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಗುಂಪನ್ನು ಭೇದಿಸಿದ್ದ ದೆಹಲಿ ಪೊಲೀಸರು, ಎಂಬಿಬಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದರು. ನೀಟ್ ಪರೀಕ್ಷೆಗೆ ಅಭ್ಯರ್ಥಿಯ ಪರವಾಗಿ ನಕಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಲು ಇವರು ತಲಾ ₹20 ಲಕ್ಷದಿಂದ ₹25 ಲಕ್ಷ ಪಡೆಯುತ್ತಿದ್ದರು ಎಂಬುದು ತಿಳಿಯಿತು. ಈ ರೀತಿ ದೆಹಲಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಹಾಜರಾಗಿದ್ದ ಇಬ್ಬರು ನಕಲಿ ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
* ಎನ್‌ಟಿಎ ನೀಟ್ ಫಲಿತಾಂಶ ಇದೇ 4ರಂದು ಪ್ರಕಟವಾಯಿತು. ಒಂದೇ ಪರೀಕ್ಷಾ ಕೇಂದ್ರದ 6 ಅಭ್ಯರ್ಥಿಗಳು ಸೇರಿದಂತೆ ಒಟ್ಟು 67 ಅಭ್ಯರ್ಥಿಗಳು ಪ್ರಥಮ ರ್‍ಯಾಂಕ್ ಹಂಚಿಕೊಂಡಿರುವ ಸಂಗತಿಯು ನೀಟ್ ಆಕಾಂಕ್ಷಿಗಳಲ್ಲಿ ಹಲವು ಅನುಮಾನಗಳನ್ನು ಮೂಡಿಸಿತು.
ಕೆಲ ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ಪರೀಕ್ಷಾ ಸಮಯ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಕೆಲ ಅಭ್ಯರ್ಥಿಗಳು ಪಂಜಾಬ್ ಮತ್ತು ಹರಿಯಾಣ, ದೆಹಲಿ, ಛತ್ತೀಸಗಢ ಹೈಕೋರ್ಟ್‌ಗಳಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಅಭ್ಯರ್ಥಿಗಳ ಮನವಿಗಳನ್ನು ಪರಿಶೀಲಿಸಲು ತಜ್ಞರ ಪರಿಹಾರ ಸಮಿತಿ ರಚಿಸಿ, ಅದರ ಶಿಫಾರಸುಗಳ ಅನ್ವಯ ಅಭ್ಯರ್ಥಿಗಳಿಗೆ ಪರಿಹಾರಾತ್ಮಕ ಅಂಕಗಳನ್ನು ನೀಡಲಾಗಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.
ದೂರು ಬಂದಿರುವ ಪರೀಕ್ಷಾ ಕೇಂದ್ರಗಳ ಕಾರ್ಯನಿರ್ವಾಹಕರಿಂದ ಸ್ವೀಕರಿಸಿದ ವರದಿ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಗಳಿಗಳನ್ನು ಪರಿಶೀಲಿಸಿದ ತಜ್ಞರ ಸಮಿತಿಯು ಅಭ್ಯರ್ಥಿಗಳ ಪರೀಕ್ಷಾ ಸಮಯ ನಷ್ಟವಾಗಿರುವುದನ್ನು ಖಚಿತಪಡಿಸಿಕೊಂಡಿದೆ. ಅಂತಹ ಅಭ್ಯರ್ಥಿಗಳಿಗೆ ಅವರ ಪರೀಕ್ಷೆ ಬರೆಯುವ ಸಾಮರ್ಥ್ಯ ಮತ್ತು ಸಮಯ ನಷ್ಟವನ್ನು ಆಧರಿಸಿ ಪರಿಹಾರಾತ್ಮಕ ಅಂಕಗಳನ್ನು ನೀಡಲಾಗಿದೆ. 2018ರ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಅಳವಡಿಸಿಕೊಂಡಿರುವ ಸಾಮಾನ್ಯ ಸೂತ್ರವನ್ನು ಆಧರಿಸಿ 1,563 ಅಭ್ಯರ್ಥಿಗಳಿಗೆ ಪರಿಹಾರಾತ್ಮಕ ಅಂಕಗಳನ್ನು ನೀಡಲಾಗಿದೆ. ಇದರಿಂದ ಹಲವು ಆ ಅಭ್ಯರ್ಥಿಗಳ ಅಂಕಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿದ್ದು, ಒಬ್ಬರಿಗೆ 718, ಮತ್ತೊಬ್ಬರಿಗೆ 719 ಅಂಕಗಳು ಬಂದಿವೆ ಎಂದು ಎನ್‌ಟಿಎ ಹೇಳಿದೆ.
ಭೌತವಿಜ್ಞಾನದ ಪ್ರಶ್ನೆಯೊಂದರ ಕೀ ಉತ್ತರಕ್ಕೆ ಸಂಬಂಧಿಸಿದಂತೆ 13,373 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದ ಹಳೆ ಆವೃತ್ತಿ ಮತ್ತು ಹೊಸ ಆವೃತ್ತಿಗಳಲ್ಲಿನ ವ್ಯತ್ಯಾಸದಿಂದಾಗಿ ಈ ಗೊಂದಲ ಉಂಟಾಗಿತ್ತು. ಹೀಗಾಗಿ ವಿಷಯ ತಜ್ಞರು, ಈ ಪ್ರಶ್ನೆಗೆ ಎರಡು ಆಯ್ಕೆಗಳನ್ನು ಪರಿಗಣಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಈ ಒಂದು ಕೀ ಉತ್ತರದ ಪರಿಷ್ಕೃತ ಅಂಕಗಳ ಲಾಭ ದೊರೆತ 44 ಅಭ್ಯರ್ಥಿಗಳು 720 ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಮತ್ತು ಆರು ಅಭ್ಯರ್ಥಿಗಳಿಗೆ ಸಮಯ ನಷ್ಟದ ಪರಿಹಾರಾತ್ಮಕ ಅಂಕಗಳೂ ದೊರೆತಿದ್ದರಿಂದ ಗರಿಷ್ಠ ಅಂಕ ಪಡೆಯಲು ಸಾಧ್ಯವಾಯಿತು ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.