ದಕ್ಷಿಣದ ಕಾವೇರಿ ಕಣಿವೆ, ಉತ್ತರದ ಕೃಷ್ಣಾ ಕಣಿವೆ ಜಲಾನಯನ ಪ್ರದೇಶಗಳಲ್ಲಿ ಹಲವು ನೀರಾವರಿ ಯೋಜನೆಗಳು ದಶಕಗಳಿಂದ ಕುಂಟುತ್ತಾ ಸಾಗಿವೆ. ಮಧ್ಯೆ ಎತ್ತಿನಹೊಳೆ ಯೋಜನೆ ತೆವಳುತ್ತಿದೆ. ಹಲವು ಯೋಜನೆಗಳು ಹೀಗೆ ನನೆಗುದಿಗೆ ಬೀಳಲು ಮುಖ್ಯ ಕಾರಣ ಹಣಕಾಸಿನ ಅಲಭ್ಯತೆ. ಯೋಜನೆ ವಿಳಂಬವಾದಷ್ಟೂ ಒಂದೆಡೆ ಯೋಜನಾ ಗಾತ್ರ ಹೆಚ್ಚುತ್ತಾ ಹೋದರೆ, ಇನ್ನೊಂದೆಡೆ ಬೇಗ ನೀರಾವರಿ ಸೌಲಭ್ಯ ಸಿಗದೆ ಕೃಷಿ ಉತ್ಪಾದನೆಯೂ ಕುಂಠಿತಗೊಳ್ಳುತ್ತಿದೆ. ರಾಜ್ಯ ಸರ್ಕಾರದ ಇನ್ನೊಂದು ಬಜೆಟ್ ಮಂಡನೆ ಹತ್ತಿರವಾದ ಈ ಹೊತ್ತಿನಲ್ಲಿ ರಾಜ್ಯದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳು ಯಾವುವು, ಬೇಕಾದ ಹಣಕಾಸಿನ ವ್ಯವಸ್ಥೆ ಎಷ್ಟು ಎಂಬುದರ ವಿಶ್ಲೇಷಣೆ ನಡೆಸಿದ್ದಾರೆ ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್
ಯುಕೆಪಿಗೆ ಸಪ್ತಸೂತ್ರಗಳು
ಅಧಿಸೂಚನೆಗೆ ಯತ್ನ: ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ಎರಡನೇ ನ್ಯಾಯಮಂಡಳಿ ಮಾಡಿದ ನೀರಿನ ಅಂತಿಮ ಹಂಚಿಕೆ ಆದೇಶದ ಕುರಿತು ಕೇಂದ್ರ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕು. ಏಕೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಅನುಷ್ಠಾನಕ್ಕೆ ಈ ಅಧಿಸೂಚನೆ ಅತ್ಯಗತ್ಯ
ಆಯೋಗದ ಅನುಮತಿ: ಯುಕೆಪಿ ಮೂರನೇ ಹಂತ ಅತ್ಯಂತ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದು, 130 ಟಿಎಂಸಿ ಅಡಿ ನೀರಿನ ಬಳಕೆ ಇದರಿಂದ ಸಾಧ್ಯ. 5.3 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ. ಹೀಗಾಗಿ ಕೇಂದ್ರ ಜಲ ಆಯೋಗದಿಂದ ಈ ಯೋಜನೆಗೆ ಆದ್ಯತೆಯ ಮೇಲೆ ಅನುಮತಿ ಪಡೆಯಬೇಕಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಈಗಾಗಲೇ ₹ 10,236 ಕೋಟಿ ವ್ಯಯಿಸಿದೆ. ಯೋಜನೆ ಎಷ್ಟೇ ಪ್ರಗತಿ ಸಾಧಿಸಿದರೂ ನೀರು ಬಳಕೆಯ ಮೇಲೆ ಹಕ್ಕು ಸಿಗುವುದು ಕೇಂದ್ರವು ಅಧಿಸೂಚನೆ ಹೊರಡಿಸಿದ ಬಳಿಕವಷ್ಟೆ
ಅಣೆಕಟ್ಟೆಯ ಎತ್ತರ ಹೆಚ್ಚಳ: ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಈಗಿನ 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಬೇಕಿದೆ. ಇದು ತುಂಬಾ ಸುಲಭದ ಕೆಲಸ. ಏಕೆಂದರೆ, ಅಣೆಕಟ್ಟೆಯ ಗೇಟ್‌ಗಳನ್ನು ಆರಂಭದಲ್ಲೇ 524.256 ಮೀಟರ್‌ಗೆ ವಿನ್ಯಾಸಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಆ ಗೇಟ್‌ಗಳ ಎತ್ತರವನ್ನು ತಗ್ಗಿಸಲಾಗಿತ್ತು. ಗೇಟ್‌ಗಳ ಕತ್ತರಿಸಿದ ಭಾಗವನ್ನು ಸುರಕ್ಷಿತವಾಗಿ ಇಡಲಾಗಿದ್ದು, 2–3 ತಿಂಗಳಲ್ಲೇ ಅವುಗಳನ್ನು ಮರು ಜೋಡಣೆ ಮಾಡಬಹುದಾಗಿದೆ
ಭೂಸ್ವಾಧೀನ: ಯುಕೆಪಿ ಮೂರನೇ ಹಂತದ ಯೋಜನೆಗೆ ಒಟ್ಟಾರೆ 1,33,867 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದ್ದು, ಅದರಲ್ಲಿ 18,039 ಎಕರೆ ಸ್ವಾಧೀನ ಪ್ರಕ್ರಿಯೆ ಮಾತ್ರ ಮುಕ್ತಾಯದ ಹಂತದಲ್ಲಿದೆ. 20 ಗ್ರಾಮಗಳ ಪುನರ್‌ವಸತಿಗೂ ವ್ಯವಸ್ಥೆ ಮಾಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಗೆ ದರ ನಿಗದಿಯೇ ಮುಖ್ಯ ಅಡೆತಡೆಯಾಗಿದ್ದು, ತ್ವರಿತ ನಿರ್ಣಯಗಳ ಮೂಲಕ ವಿಳಂಬವನ್ನು ತಪ್ಪಿಸಬೇಕಿದೆ. ಸರ್ಕಾರ ಪ್ರತೀ ಎಕರೆ ಒಣಭೂಮಿಗೆ ₹ 6 ಲಕ್ಷ, ನೀರಾವರಿ ಭೂಮಿಗೆ ₹ 10 ಲಕ್ಷ ನೀಡಲು ಒಲವು ತೋರಿದ್ದರೆ, ರೈತರು ಪ್ರತೀ ಎಕರೆ ಒಣಭೂಮಿಗೆ ₹ 30 ಲಕ್ಷ, ನೀರಾವರಿ ಭೂಮಿಗೆ ₹ 40 ಲಕ್ಷ ಕೇಳುತ್ತಿದ್ದಾರೆ. ದರ ನಿಗದಿ ಮಾಡುವಾಗ ಉದಾರವಾಗಿ ನಡೆದುಕೊಳ್ಳಬೇಕಿದೆ
ಅನುದಾನ: ಯುಕೆಪಿ ಮೂರನೇ ಹಂತದ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮಾಡಿ, ಅದಕ್ಕೆ ಆದ್ಯತೆಯ ಮೇಲೆ ಹಣಕಾಸಿನ ವ್ಯವಸ್ಥೆ ಮಾಡಬೇಕು. ಬಜೆಟ್ ಅಲ್ಲದೆ, ಇತರ ಮೂಲಗಳಿಂದಲೂ ಹಣ ಹೊಂದಿಸುವ ಕೆಲಸ ಮಾಡಬೇಕು. ಕೇಂದ್ರದಿಂದ ಅನುದಾನವನ್ನೂ ಕೇಳಬೇಕು. ಅಗತ್ಯವಾದರೆ ವಿಶ್ವ ಬ್ಯಾಂಕ್, ಐಡಿಬಿ, ಜೈಕಾದಂತಹ ಸಂಸ್ಥೆಗಳಿಂದ ಸಾಲ ತರಬೇಕು. ಈ ಯೋಜನೆ ಪೂರ್ಣಗೊಳ್ಳುವವರೆಗೆ ಕೃಷ್ಣಾ ಕಣಿವೆಯಲ್ಲಿ ಬೇರೆ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು
ವಿದ್ಯುತ್ ಪೂರೈಕೆ: ಯುಕೆಪಿಯ ಎಲ್ಲ 33 ಏತ ನೀರಾವರಿ ಯೋಜನೆಗಳು ಕಾರ್ಯಾಚರಣೆ ನಡೆಸಲು 540 ಮೆಗಾವಾಟ್ ವಿದ್ಯುತ್‌ನ ಅಗತ್ಯವಿದೆ. ಅವುಗಳಿಗೆ ನಿರಂತರ ವಿದ್ಯುತ್ ಪೂರೈಸಲು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕವನ್ನು ಈ ಯೋಜನೆಗಳಿಗೆ ಮೀಸಲಾದ ವಿದ್ಯುತ್ ಘಟಕ ಎಂದು ಘೋಷಿಸಬೇಕು
ಮಂಡಳಿ ರಚನೆ: ಕೃಷ್ಣಾ ಜಲ ತೀರ್ಪು ಅನುಷ್ಠಾನ ಮಂಡಳಿ ರಚನೆಗೆ ಕೇಂದ್ರದ ಮೇಲೆ ಒತ್ತಡ ತರಬೇಕು
ಪಾಲಾರ್ ಮತ್ತು ಪೆನ್ನಾರ್: ಕೊನೆಗೊಳ್ಳಬೇಕಿದೆ ಕಠಿಣ ಕಾಯ್ದೆ
ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜಲಾನಯನ ಪ್ರದೇಶ ಹೊಂದಿರುವ ಪಾಲಾರ್ ಮತ್ತು ಪೆನ್ನಾರ್ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಬ್ರಿಟಿಷರ ಕಾಲದ ‘1892ರ ಕಾಯ್ದೆ’ ಅಡ್ಡಿಯಾಗಿದೆ. ಈ ಕಾಯ್ದೆ ರದ್ದುಗೊಳಿಸಿ, ಹೊಸ ನ್ಯಾಯಮಂಡಳಿ ರಚಿಸುವಂತೆಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರವು ಒತ್ತಡ ಹೇರಬೇಕು. ಹೀಗಾದಲ್ಲಿ ಈ ಭಾಗದದಲ್ಲಿ ಸುಮಾರು 10ರಿಂದ 15 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಮೂರು ಜಿಲ್ಲೆಗಳಲ್ಲದೇ, ಮಧ್ಯ ಕರ್ನಾಟಕದ ಬರಪೀಡಿತ 7 ಜಿಲ್ಲೆಗಳಿಗೂ ನೀರು ಉಣಿಸಬಹುದು.
ಮಹದಾಯಿ: ಮರು ವಿನ್ಯಾಸ ಅಗತ್ಯ
ಮಹದಾಯಿ ನೀರು ವ್ಯಾಜ್ಯ ಪರಿಹಾರ ಮಂಡಳಿಯು (ಎಂಡಬ್ಲ್ಯುಡಿಟಿ) ಕರ್ನಾಟಕಕ್ಕೆ13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ನೀರು ಹಂಚಿಕೆ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಿ, ಮೂರು ತಿಂಗಳೊಳಗೆ ಮಹದಾಯಿ ನೀರು ನಿರ್ವಹಣೆ ಪ್ರಾಧಿಕಾರ (ಎಂಡಬ್ಲ್ಯುಎಂಎ) ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮಂಡಳಿಸೂಚಿಸಿತ್ತು. ಆದರೆ ಕೇಂದ್ರ ಸರ್ಕಾರ ಯಾವುದನ್ನೂ ಮಾಡಿಲ್ಲ. ಗೆಜೆಟ್ ಪ್ರಕಟಣೆಗೆ ಒತ್ತಾಯಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋದರೆ ಮಾತ್ರ ತನ್ನ ಪಾಲಿನ ನೀರು ಬಳಸಿಕೊಳ್ಳಲು ಸಾಧ್ಯ.
ಉದ್ದೇಶಿತ ಬಂಡೂರಿ ಜಲಾಶಯಕ್ಕೆ 2.18 ಟಿಎಂಸಿ ಅಡಿ ಹಾಗೂ ಉದ್ದೇಶಿತ ಕಳಸಾ ಜಲಾಶಯಕ್ಕೆ 1.72 ಟಿಎಂಸಿ ಅಡಿ ನೀರನ್ನು ಮಹದಾಯಿ ನದಿಯಿಂದ ಕರ್ನಾಟಕ ಸರ್ಕಾರತಿರುಗಿಸಬಹುದು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಎಚ್ಚರ ವಹಿಸಿ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ.ಈ ಎರಡೂ ಯೋಜನೆಗಳಿಗೆ ಹಂಚಿಕೆ ಮಾಡಿರುವ ನೀರು ಸಂಗ್ರಹಣೆ ಮಿತಿ ಅರಿತು, ಅನಗತ್ಯ ಯೋಜನೆಗಳನ್ನು ನಿಲ್ಲಿಸಬೇಕಿದೆ. ಮರುವಿನ್ಯಾಸ ಮಾಡಿದ ಹೊಸ ಯೋಜನೆಯನ್ನು ರೂಪಿಸಬೇಕಿದೆ.
ಗೋದಾವರಿಯಿಂದ ಹೆಚ್ಚುವರಿ ನೀರು
ಕೃಷ್ಣಾ ಎರಡನೇ ನ್ಯಾಯಮಂಡಳಿ ವಿಚಾರದಲ್ಲಿ ಅನುಸರಿಸಿದ ತತ್ವಗಳನ್ನೇ, ಗೋದಾವರಿ ಜಲಾನಯನ ಪ್ರದೇಶದಿಂದ ಹೆಚ್ಚುವರಿ ನೀರನ್ನು ಪಡೆದುಕೊಳ್ಳುವಲ್ಲಿಯೂ ಅನುಸರಿಸುವ ಅಗತ್ಯವಿದೆ. ಗೋದಾವರಿ ನೀರನ್ನು ಕೃಷ್ಣಾ ನದಿಗೆ ತಿರುಗಿಸಲು ಉದ್ದೇಶಿಸಲಾಗಿದೆ. ಈ ಪ್ರಕಾರ, ರಾಜ್ಯಕ್ಕೆ 45.39 ಟಿಎಂಸಿ ಅಡಿ ನೀರನ್ನು ಗೋದಾವರಿ ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಆದರೆ ಗೋದಾವರಿ ಜಲಾನಯನ ಪ್ರದೇಶದ ಲಭ್ಯ ನೀರಿನ ಮರು ಮೌಲ್ಯಮಾಪನ ಮಾಡಿದರೆ, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 20ರಿಂದ 25 ಟಿಎಂಸಿ ಅಡಿ ನೀರು ದೊರೆಯುವ ಸಾಧ್ಯತೆಯಿದೆ. ಇದರಿಂದ ಹೈದರಾಬಾದ್–ಕರ್ನಾಟಕ ಪ್ರದೇಶಕ್ಕೆ ನೆರವಾಗಲಿದೆ. ಕೃಷ್ಣಾ ಎರಡನೇ ನ್ಯಾಯಮಂಡಳಿ ರಚಿಸಿದ ರೀತಿಯಲ್ಲೇ ಪ್ರತ್ಯೇಕ ನ್ಯಾಯಮಂಡಳಿ ರಚಿಸಿದರೆ, ಇದು ಸಾಧ್ಯವಾಗಲಿದ್ದು, ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚು ಶ್ರಮ ವಹಿಸಬೇಕಿದೆ.
ಕಾವೇರಿ ಕಣಿವೆಯಲ್ಲಿ ಆಗಬೇಕಾದ್ದು
* ಯೋಜನೆಗೆ ಅನುಗುಣವಾಗಿ ನೀರು ಹಂಚಿಕೆ
ಕಾವೇರಿ ನದಿ ನೀರು ವ್ಯಾಜ್ಯ ಪರಿಹಾರ ಮಂಡಳಿಯು (ಸಿಡಬ್ಲ್ಯುಡಿಟಿ) ಕಾವೇರಿ ಕಣಿವೆ ಪ್ರದೇಶದ ವಿವಿಧ ಯೋಜನೆಗಳಿಗಾಗಿ ಒಟ್ಟು 250.62 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ತನಗೆ ಲಭ್ಯವಾದ ನೀರನ್ನು ರಾಜ್ಯವು ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಿದ್ದು, ಇನ್ನೂ 32.39 ಟಿಎಂಸಿ ಅಡಿ ನೀರಿನ ಹಂಚಿಕೆ ಬಾಕಿ ಇದೆ. ಈ ನೀರನ್ನು ಹೊಸ ಯೋಜನೆಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಪ್ರತಿ ಯೋಜನೆಗೆ ಸಿಡಬ್ಲ್ಯುಡಿಟಿ ಹಂಚಿಕೆ ಮಾಡಿರುವ ಪ್ರಮಾಣವನ್ನು ನಮೂದಿಸಿ, ಎಲ್ಲಾ ಯೋಜನೆಗಳಿಗೆ ಹೊಸ ಆದೇಶವನ್ನು ಹೊರಡಿಸಬೇಕು. ಸಿಡಬ್ಲ್ಯುಡಿಟಿ ವಿಧಿಸಿದ ಮಿತಿಯನ್ನು ಗಮನದಲ್ಲಿಟ್ಟುಕೊಂಡೇ ಹೊಸ ಯೋಜನೆಗಳಿಗೆ ನೀರು ಹಂಚಿಕೆ ಮಾಡಬೇಕು
ಜಲ ಸಂಪನ್ಮೂಲ ಇಲಾಖೆಯು ಬೆಂಗಳೂರು ನಗರ ಸೇರಿದಂತೆ ಎಲ್ಲಾ ನಗರ ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು ಹಾಗೂ ಉದ್ದಿಮೆಗಳ ಅಗತ್ಯವನ್ನು ಈಡೇರಿಸುವ ಯೋಜನೆಗಳನ್ನು ರೂಪಿಸಬೇಕು.
* ‘ಕೊರತೆ ವರ್ಷ’ಕ್ಕಾಗಿ ಸೂತ್ರ
ಮಳೆಯ ಕೊರತೆಯಿಂದಾಗಿ ಎರಡು ವರ್ಷಕ್ಕೆ ಒಂದು ಬಾರಿ ಕಾವೇರಿ ನೀರಿನ ಹರಿವಿನಲ್ಲಿ ಕುಸಿತ ಉಂಟಾಗುತ್ತದೆ ಎಂಬುದನ್ನು ಸಿಡಬ್ಲ್ಯುಡಿಟಿ ಒಪ್ಪಿಕೊಂಡಿದೆ. ಇಂಥ ಕೊರತೆ ವರ್ಷದಲ್ಲಿ ಅನುಸರಿಸಬೇಕಾದ ನೀತಿಯನ್ನು ತಿಳಿಸುವುದು ಮಂಡಳಿಯ ಹೊಣೆಯಾಗಿತ್ತು. ಮಂಡಳಿಯು ಆ ಕೆಲಸವನ್ನು ಮಾಡಿಲ್ಲ.
ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗಿಂತ ಕೆಳಗಿನ ಕಣಿವೆ ಪ್ರದೇಶದಲ್ಲಿ ಅಣೆಕಟ್ಟೆಯಾಗಲಿ, ದೊಡ್ಡ ಕೆರೆಗಳಾಗಲಿ ಇಲ್ಲ. ಆ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಬಹುತೇಕ ಪೂರ್ಣ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿಯುತ್ತದೆ. ಅಲ್ಲಿನ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ, ಕೊರತೆಯನ್ನು ಮಾಪನ ಮಾಡುವ ವ್ಯವಸ್ಥೆ ಮಾಡಬೇಕು. ಅದಕ್ಕೆ ಅನುಗುಣವಾಗಿ ರಾಜ್ಯದಿಂದ ಬಿಡುವ ನೀರಿನ ಪ್ರಮಾಣವೂ ನಿರ್ಧಾರ ಮಾಡಬೇಕು. ಇದಕ್ಕೆ ತಮಿಳುನಾಡು ಸಹ
ಆಕ್ಷೇಪಿಸಲಾರದು.
* ಮರು ಪರಿಶೀಲನೆಗೆ ಮನವಿ
ಪ್ರತಿ ವರ್ಷವೂ ಜೂನ್ ಮತ್ತು ಜುಲೈ ತಿಂಗಳಲ್ಲಿ ಬೆಳೆಗಳಿಗಾಗಿ ನೀರು ಬಿಡುವಂತೆ ರಾಜ್ಯದ ರೈತರು ಸರ್ಕಾರವನ್ನು
ಒತ್ತಾಯಿಸುತ್ತಾರೆ. ಆದ್ದರಿಂದ ಈ ಎರಡು ತಿಂಗಳುಗಳಲ್ಲಿ ತಿಂಗಳ ಲೆಕ್ಕಾಚಾರಕ್ಕೆ ಅನುಗುಣವಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಈ ಎರಡು ತಿಂಗಳ ನೀರು ಬಿಡುವ ಪ್ರಮಾಣವನ್ನು ಮರು ಪರಿಶೀಲನೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಬೇಕು.
* ಪುನರ್ ಪರಿಶೀಲನೆ
ಬೆಂಗಳೂರು ನಗರಕ್ಕೆ ಕಾವೇರಿ ನದಿ ನೀರು ಸರಬರಾಜು ಮಾಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟು, ‘ಉಳಿಕೆ ನೀರಿನ’ ಹಂಚಿಕೆಯ ವಿಚಾರವನ್ನು ಪುನರ್ ಪರಿಶೀಲನೆಗೆ ಒಳಪಡಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಹೀಗೆ ಮಾಡಿದರೆ ರಾಜ್ಯಕ್ಕೆ 2.34 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಲಭಿಸಲಿದೆ. ಈ ಬಗ್ಗೆ ರಾಜ್ಯವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು.
* ಮೇಕೆದಾಟು ಪೂರ್ಣಗೊಳಿಸಿ
ಕರ್ನಾಟಕದ ಮಟ್ಟಿಗೆ ಮೇಕೆದಾಟು ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ಸಿಡಬ್ಲ್ಯುಡಿಟಿಯ ಆಕ್ಷೇಪವೂ ಇಲ್ಲ. ಆದ್ದರಿಂದ ಅದನ್ನು ಶೀಘ್ರ ಕಾರ್ಯಗತಗೊಳಿಸಲು ಶ್ರಮಿಸಬೇಕು. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗುವುದಲ್ಲದೆ, ಇದನ್ನು ಮೀಸಲು ಜಲಾಶಯವಾಗಿಯೂ ಬಳಸಬಹುದಾಗಿದೆ.
* ಹೊಳೆ ತಿರುವು ಯೋಜನೆ
ಹೆಚ್ಚುವರಿಯಾಗಿ ನೀರನ್ನು ಪಡೆಯುವ ಸಲುವಾಗಿ ಕೊಡಗಿನಲ್ಲಿ ಹರಿಯುತ್ತಿರುವ, ಕಾವೇರಿಯ ಉಪನದಿಗಳಾದ ಕೊಂಗನಹೊಳೆ ಹಾಗೂ ಕೊಕ್ಕಟ್ಟು ಹೊಳೆಯ ಹರಿವನ್ನು ಲಕ್ಷ್ಮಣತೀರ್ಥ ಹೊಳೆಗೆ ತಿರುಗಿಸಬೇಕು. ಪಶ್ಚಿಮದತ್ತ ಹರಿಯುವ ಈ ಎರಡು ಹೊಳೆಗಳಿಂದ ಸುಮಾರು 8ರಿಂದ 10ಟಿಎಂಸಿ ಅಡಿ ನೀರನ್ನು ಪಡೆಯಬಹುದು.
ಮಧ್ಯ ಕರ್ನಾಟಕದ ನೀರಿನ ವ್ಯಥೆ
ಮಧ್ಯ ಕರ್ನಾಟಕದ ಏಳು ಜಿಲ್ಲೆಗಳು ಸದಾ ಬರಗಾಲದ ನೆರಳಲ್ಲಿ ಇರುತ್ತವೆ. ಈ ಜಿಲ್ಲೆಗಳಿಗೆ ಅಗತ್ಯವಾದಷ್ಟು ಮೇಲ್ಮೈ ನೀರಿನ ಪೂರೈಕೆಗೆ ಶಾಶ್ವತ ವ್ಯವಸ್ಥೆ ಮಾಡಬೇಕಿದೆ. ಈ ಜಿಲ್ಲೆಗಳು ‘ಮಳೆ ನೆರಳಿನ ಪ್ರದೇಶ’ದಲ್ಲಿದ್ದು, ಇಲ್ಲಿ ಸದಾ ಹರಿಯುವ ನದಿಗಳು ಇಲ್ಲ. ಈ ಜಿಲ್ಲೆಗಳ ಒಣ ಬೇಸಾಯ ಮಳೆ ನೀರನ್ನೇ ಅವಲಂಬಿಸಿದೆ.
ಈ ಜಿಲ್ಲೆಗಳು: ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ತುಮಕೂರು ಮತ್ತು ಚಿತ್ರದುರ್ಗ
* ಇಲ್ಲಿನ 39 ತಾಲ್ಲೂಕುಗಳ ಪೈಕಿ 24ರಲ್ಲಿ ಅಂತರ್ಜಲದ ಅತಿ ಬಳಕೆ ಆಗಿದೆ; 3 ತಾಲ್ಲೂಕುಗಳ ಸ್ಥಿತಿ ಗಂಭೀರವಾಗಿದ್ದರೆ, 2 ತಾಲ್ಲೂಕುಗಳ ಸ್ಥಿತಿ ಅರೆಗಂಭೀರ. 10 ತಾಲ್ಲೂಕುಗಳು ಮಿಶ್ರ ವಿಭಾಗದಲ್ಲಿ ಬರುತ್ತವೆ
* ಕಾವೇರಿ, ಕೃಷ್ಣಾ ಮತ್ತು ಗೋದಾವರಿ ಜಲವಿವಾದ ನ್ಯಾಯಮಂಡಳಿಗಳು ರಾಜ್ಯದ ಪಾಲಿನ ನೀರು ಎಷ್ಟು ಎಂಬುದನ್ನು ನಿಗದಿ ಮಾಡಿವೆ. ರಾಜ್ಯ ಜಲಸಂಪನ್ಮೂಲ ಇಲಾಖೆಯು ಈ ನೀರನ್ನು ಆಯಾ ನದಿ ಪಾತ್ರ ಪ್ರದೇಶಗಳಲ್ಲಿ ಬಳಸಿಕೊಳ್ಳಲು ನೀರಾವರಿ ಯೋಜನೆಗಳನ್ನು ಗುರುತಿಸಿವೆ. ಹಾಗಾಗಿ, ಈ ಏಳು ಜಿಲ್ಲೆಗಳಿಗೆ ಹರಿಸಲು ಈ ನದಿಗಳಲ್ಲಿ ಹೆಚ್ಚುವರಿ ನೀರು ಇಲ್ಲ
* ಈ ಜಿಲ್ಲೆಗಳಲ್ಲಿ ಹೆಚ್ಚುವರಿ ಅಂತರ್ಜಲ ಲಭ್ಯ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅಂತರ್ಜಲದ ಪರಿಸ್ಥಿತಿ ಹೇಗಿದೆ ಎಂದರೆ ಅಲ್ಲಿ ಅಂತರ್ಜಲ ತೆಗೆಯಬೇಕೆಂದರೆ ಗಣಿಗಾರಿಕೆಗೆ ಬೇಕಾದಷ್ಟು ಆಳಕ್ಕೆ ಇಳಿಯಬೇಕು. ಈ ನೀರಿನ ಗುಣಮಟ್ಟ ಅತ್ಯಂತ ಕಳಪೆ. ಅದರಲ್ಲಿ ಫ್ಲೋರೈಡ್, ನೈಟ್ರೇಟ್ ಮತ್ತು ಇತರ ಅಂಶಗಳು ಇವೆ. ಹಾಗಾಗಿ, ನೇರವಾಗಿ ಅವು ಬಳಕೆಗೆ ಯೋಗ್ಯ ಅಲ್ಲವೇ ಅಲ್ಲ
* ಕುಡಿಯುವ ನೀರು, ನೀರಾವರಿ ಮತ್ತು ಇತರ ಬಳಕೆಗೆ ನೀರು ಪೂರೈಕೆಯ ಶಾಶ್ವತ ಪರಿಹಾರ ಬೇಕು ಎಂಬ ಒತ್ತಾಯ ಈ ಭಾಗದಲ್ಲಿ ಅತ್ಯಂತ ಬಲವಾಗಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಧರಣಿಗಳೂ ನಡೆದಿವೆ
* ‘ಎಲ್ಲ ವಲಯಗಳಲ್ಲಿಯೂ ನೀರಿನ ಸಂರಕ್ಷಣೆ, ನೀರಿನ ಬಳಕೆಯಲ್ಲಿ ಹೆಚ್ಚು ದಕ್ಷತೆ’ಯು ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ ಮೂಲಮಂತ್ರವಾಗಬೇಕು ಎಂಬುದು ಸಮಗ್ರ ಜಲಸಂಪನ್ಮೂಲ ಯೋಜನೆ 1999ರ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಜಲ ನೀತಿ 2012ರ ಧ್ಯೇಯ. ಹೆಚ್ಚುವರಿ ನೀರಿನ ಹುಡುಕಾಟದಲ್ಲಿ ಈ ಮೂಲಮಂತ್ರಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ
* ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ 24 ಟಿಎಂಸಿ ನೀರನ್ನು ಈ ಭಾಗಕ್ಕೆ ತಿರುಗಿರುವ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೆ.ಸಿ.ಕಣಿವೆಯ ಸಂಸ್ಕರಿತ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಯೋಜನೆಯೂ ಇದೆ. ಈ ಯತ್ನಗಳು ಸ್ವಾಗತಾರ್ಹ. ಆದರೆ, ಈ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಸಾಲದು.
* ಕಾವೇರಿ ಮತ್ತು ಕೃಷ್ಣಾ ಕಣಿವೆಯಲ್ಲಿ ನೀರು ಸಂರಕ್ಷಣೆಯ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಮುಖ ಜಲಾಶಯಗಳ ನೀರು ಸಂಗ್ರಹ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು, ಸಣ್ಣ ನೀರಾವರಿಯ ಕೆರೆಗಳ ಹೂಳೆತ್ತುವ ಕೆಲಸ ಮಾಡಬೇಕು, ಬತ್ತ ಮತ್ತು ಕಬ್ಬು ಬೆಳೆಗೆ ಕಡಿಮೆ ನೀರು ಬಳಕೆಯ ಶ್ರೀ ವಿಧಾನ ಅಳವಡಿಸಿಕೊಳ್ಳಬೇಕು. ಈ ಎಲ್ಲ ಕ್ರಮಗಳಿಂದ ಈ ನದಿ ಪಾತ್ರಗಳಲ್ಲಿ ಮೇಲ್ಮೈ ನೀರು ಹೆಚ್ಚುವರಿಯಾಗಿ ದೊರೆಯುತ್ತದೆ. ಈ ನೀರನ್ನು, ಈಗ ಇರುವ ಜಲಾಶಯಗಳಲ್ಲಿ ಅಥವಾ ಹೊಸ ಅಣೆಕಟ್ಟೆಗಳನ್ನು ನಿರ್ಮಿಸಿ ಸಂಗ್ರಹಿಸಬೇಕು. ಇದನ್ನು ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಹರಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.