ನವದೆಹಲಿ: ಮೋದಿ ಅವರ ರಾಜಕೀಯ ಕುಟುಂಬದ ಭಾಗವಾಗುವ ಮೂಲಕ ಅಪರಾಧಿಗಳಿಗೆ ರಕ್ಷಣೆ ನೀಡುವುದೇ ಮೋದಿ ಗ್ಯಾರಂಟಿಯಾಗಿದೆಯೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕರ್ನಾಟಕದಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಕುರಿತು ಮೋದಿ ಅವರು ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಎಲ್ಲಾ ಗೊತ್ತಿದ್ದರೂ ಪ್ರಧಾನಿ ಮೋದಿಯವರು ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿದ್ದು ಏಕೆ?, ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯು ದೇಶದಿಂದ ಪರಾರಿಯಾಗಲು ಹೇಗೆ ಸಾಧ್ಯ?’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
‘ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮೌನ ಬೆಂಬಲ’ ನೀಡುವ ಮೂಲಕ ಆರೋಪಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ’ ಎಂದು ರಾಹುಲ್ ಟೀಕಾ ಪ್ರಹಾರ ನಡೆಸಿದ್ದಾರೆ.
ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಎಚ್.ಡಿ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.