ಮೂರು ಕಡೆಗಳಿಂದ ಸಮುದ್ರ ಆವರಿಸಿರುವ ನಮ್ಮ ದೇಶಕ್ಕೆನೌಕಾಪಡೆಯ ಪ್ರಾಮುಖ್ಯತೆ ತುಸು ತಡವಾಗಿಯಾದರೂ ಚೆನ್ನಾಗಿಯೇ ಅರಿವಾಗಿದೆ. ಸುಮಾರು 7000 ಕಿ.ಮೀ. ಸಮುದ್ರ ತೀರಹೊಂದಿರುವ ಭಾರತದಲ್ಲಿಯುದ್ಧನೌಕೆ, ಸಬ್‌ಮರೀನ್‌ಗಳ ನಿರ್ಮಾಣದಲ್ಲಿ ಸ್ವಾವಲಂಬಿಯಾಗುವ ಪ್ರಯತ್ನದ ಜೊತೆಜೊತೆಗೆ ‘ನೀಲಿ ಸಮುದ್ರದ ನಿರ್ಣಾಯಕ ಶಕ್ತಿ’ ಆಗಬೇಕು ಎನ್ನುವ ಹಂಬಲವೂ ಎದ್ದು ಕಾಣುತ್ತಿದೆ.
ಈಚೆಗಷ್ಟೇ ಸರಿದುಹೋದ ‘ಭಾರತೀಯ ನೌಕಾಪಡೆ ದಿವಸ’ದಂದು(ಇಂಡಿಯನ್ ನೇವಿ ಡೇ– ಡಿ.4) ರಕ್ಷಣಾ ಸಚಿವರು ಮತ್ತು ಸ್ವತಃ ನೌಕಾಪಡೆ ಮಾಡಿದ ಟ್ವೀಟ್‌ಗಳಲ್ಲಿಈ ಹಂಬಲ ಎದ್ದು ಕಾಣುತ್ತಿತ್ತು. ಹೌದು, ಇಷ್ಟಕ್ಕೂ ‘ನೀಲಿ ಕಡಲ ನೌಕಾಪಡೆ’ ಎಂದರೇನು? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
ಇದನ್ನೂ ಓದಿ:ನೀಲಿ ಕಡಲ ಆಳುವಾಸೆ
ನೀಲಿಕಡಲ ನೌಕಾಪಡೆ (ಬ್ಲೂ ವಾಟರ್ ನೇವಿ) ಎಂದರೇನು?
ನೌಕಾಪಡೆ ದಿವಸದಂದುರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದ ವಿಡಿಯೊದಲ್ಲಿ‘ಶತ್ರುಗಳ ಎದೆಯಲ್ಲಿಭೀತಿ ಹುಟ್ಟಿಸುವ ಭಾರತೀಯ ನೌಕಾಪಡೆಯು ನೀಲಿಕಡಲ ದೊಡ್ಡಶಕ್ತಿ’ ಎಂಬ ಒಕ್ಕಣೆ ಇತ್ತು. ಇದೇ ವೇಳೆ ನೌಕಾಪಡೆ ಬಿಡುಗಡೆ ಮಾಡಿದ ವಿಡಿಯೊದಲ್ಲಿಯೂ ‘ನೀಲ ಕಡಲ ದೊಡ್ಡ ಶಕ್ತಿ’ (formidable blue water force) ಎಂದು ಬಣ್ಣನೆ ಇತ್ತು.ನೌಕಾಪಡೆಯ ಪರಿಭಾಷೆಯಲ್ಲಿ ‘ನೀಲಿ’ ಎನ್ನುವುದು ಕೇವಲ ಬಣ್ಣವಲ್ಲ. ಅದು ಒಂದು ದೇಶದ ನೌಕಾಪಡೆಯ ಸಾಮರ್ಥ್ಯವನ್ನು ಬಿಂಬಿಸುವ ಪಾರಿಭಾಷಿಕ ಪದ.
ಬ್ಲೂ ವಾಟರ್ ಫೋರ್ಸ್ ಅಥವಾ ಬ್ಲೂ ವಾಟರ್ ನೇವಿ ಎನ್ನುವುದಕ್ಕೆನಿರ್ದಿಷ್ಟವಾಗಿ ಇಂಥದ್ದೇ ಎನ್ನುವ ವ್ಯಾಖ್ಯಾನ ಇಲ್ಲ. ಸಾಮಾನ್ಯವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಮಾನವಾಹಕ ನೌಕೆಗಳಿರುವ ನೌಕಾಪಡೆಗಳನ್ನು ಬ್ಲೂ ವಾಟರ್ ನೇವಿ ಎನ್ನುತ್ತಾರೆ.
2015ರಲ್ಲಿ ಪ್ರಕಟವಾದ ಭಾರತೀಯ ನೌಕಾಪಡೆಯ ಅಧಿಕೃತದಾಖಲೆಗಳ ಪ್ರಕಾರ, ‘ದೇಶದ ಗಡಿಯಿಂದ ಅತಿದೂರದಲ್ಲಿ ವೈವಿಧ್ಯಮಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವು ಒಂದು ನೌಕಾಪಡೆಯನ್ನು ನೀಲಿ ಕಡಲು ಮತ್ತು ಕಂದು ಕಡಲು ನೌಕಾಪಡೆಗಳ ನಡುವೆ ಗೆರೆ ಎಳೆಯುತ್ತದೆ.ನೀಲಿ ಕಡಲ ನೌಕಾಪಡೆ ಎನಿಸಿಕೊಳ್ಳಲು ಬಲಿಷ್ಠ ಆಂತರಿಕ ಶಕ್ತಿ, ಅಗತ್ಯ ಸೌಕರ್ಯಗಳು, ನಿಗಾವಣೆ ಸಾಮರ್ಥ್ಯ, ಮಾರ್ಗಸೂಚಿ ಪ್ರಣಾಳಿಕೆ ಮತ್ತು ವ್ಯವಸ್ಥಿತ ಸಂಘಟನೆ ಇರಬೇಕಾಗುತ್ತದೆ. ಅತಿದೂರದ ಕಾರ್ಯಾಚರಣೆ ಎಂದರೆ ಯಾವುದೇ ಪ್ರದೇಶಕ್ಕೆ ಇಚ್ಛಿತ ವೇಗದಲ್ಲಿ ಧಾವಿಸುವ, ಅದನ್ನು ಇಷ್ಟಪಟ್ಟಷ್ಟು ದಿನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ, ದೀರ್ಘಕಾಲ ಅಲ್ಲಿ ಅಸ್ತಿತ್ವ ಕಾಪಾಡಿಕೊಳ್ಳುವ ಮತ್ತು ಯಾವುದೇ ಭೂಪ್ರದೇಶದಲ್ಲಿ ಮಾತೃಭೂಮಿಯ ಹಿತಾಸಕ್ತಿಗೆ ಪೂರಕವಾದ ಗುರಿಗಳನ್ನು ಮುಟ್ಟುವ ಸಾಮರ್ಥ್ಯ ಸೇರುತ್ತದೆ.
ಸದ್ಯದ ಜಗತ್ತಿನಲ್ಲಿವಿಶ್ವದ ಬಹುತೇಕ ನೌಕಾಪಡೆಗಳಿಗೆ ಬಹುದೂರದವರೆಗೆ ತನ್ನ ನೌಕೆಗಳನ್ನು ಕಳಿಸುವ ಸಾಮರ್ಥ್ಯವೇನೋ ಇದೆ. ಆದರೆ ತನ್ನ ಸಾರ್ವಭೌಮ ದೇಶದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಯಾವುದೇ ಸಮುದ್ರದಲ್ಲಿ ನೌಕೆಗಳ (ವಾಣಿಜ್ಯ, ಸಂಶೋಧನೆ, ಮೀನುಗಾರಿಕೆ... ಇತರೆ) ಸಂಚಾರ ನಿರ್ಬಂಧಿಸುವ, ಬಂದರಿನ ಸಂಪರ್ಕ ನಿಯಂತ್ರಿಸುವ ಸಾಮರ್ಥ್ಯ ನೀಲಿ ಕಡಲ ನೌಕಾಪಡೆಗೆ ಇರಬೇಕು. ಇಂಧನ, ಆಹಾರ ಅಥವಾ ಶಸ್ತ್ರಾಸ್ತ್ರ ಮರುಭರ್ತಿಗಾಗಿ ಮಾತೃಭೂಮಿಯ ಬಂದರಿಗೆ ಮರಳಿ ಬರಬೇಕು ಎನ್ನುವ ಅನಿವಾರ್ಯತೆ ಇರಬಾರದು.
ನೌಕಾಪಡೆಗಳನ್ನು ಇನ್ನೂ ಯಾವೆಲ್ಲಾ ರೀತಿಯಲ್ಲಿ ವಿಂಗಡಿಸುತ್ತಾರೆ?
ನೌಕಾಪಡೆಯ ಸಾಮರ್ಥ್ಯವನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತಾರೆ. ತನ್ನ ದೇಶದ ತೀರದಲ್ಲಿ ಕಾರ್ಯಾಚರಣೆ ಮಾಡುವ ಪ್ರಾಥಮಿಕ ಹಂತದ ನೌಕಾಪಡೆಯನ್ನು ಬ್ರೌನ್ ವಾಟರ್ ನೇವಿ ಎಂದೂ, ಅದಕ್ಕಿಂತ ತುಸು ಮುಂದೆ ತೆರಳಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವಿರುವುದಕ್ಕೆ ಗ್ರೀನ್ ವಾಟರ್ ಫೋರ್ಸ್ ಎಂದೂ, ಅದಕ್ಕೂ ಹೆಚ್ಚು ಸಾಮರ್ಥ್ಯ ಇರುವುದಕ್ಕೆ ಬ್ಲೂವಾಟರ್ ಫೋರ್ಸ್ ಎಂದೂ ಕರೆಯುತ್ತಾರೆ.
ಭಾರತೀಯ ನೌಕಾಪಡೆಯ ಪ್ರಸ್ತುತ ಸ್ಥಿತಿಗತಿ
ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ತನ್ನಲ್ಲಿರುವ ಇಂಧನ ಮರುಭರ್ತಿ ವಿಮಾನಗಳನ್ನು ಬಳಸಿ, ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ರೀಚ್ (ತಲುಪುವಿಕೆ) ಹೆಚ್ಚಿಸುವ ಸಾಮರ್ಥ್ಯ ಬಂದಿದೆ. ಟಾರ್ಪೆಡೊ (ನೀರಿನಾಳದ ಕ್ಷಿಪಣಿಗಳು) ಮತ್ತು ಸಬ್‌ಮರೀನ್‌ಗಳ ದಾಳಿಯನ್ನು ಯುದ್ಧನೌಕೆ ಕರ್ಮೋತ್ರಾ ಸಶಕ್ತವಾಗಿ ನಿರ್ವಹಿಸಬಲ್ಲದು.
ವಿಶಾಖಪಟ್ಟಣ ನೌಕಾನೆಲೆಯಲ್ಲಿ ನಿರ್ಮಾಣವಾದ ಭಾರತದ ಮೊದಲ (ಸ್ವದೇಶಿ ನಿರ್ಮಿತ) ಅಣ್ವಸ್ತ್ರ ಚಾಲಿತ ಸಬ್‌ಮರೀನ್ ಐಎನ್ಎಸ್ ಅರಿಹಂತ್ ಸದ್ದಿಲ್ಲದೆ ಸೇವೆಗೆ ನಿಯೋಜನೆಗೊಂಡಿದೆ. ರಕ್ಷಣಾ ಇಲಾಖೆ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಲೂ ಇಲ್ಲ– ನಿರಾಕರಿಸುತ್ತಲೂ ಇಲ್ಲ. ಐಎನ್‌ಎಸ್ ಅರಿಹಂತ್‌ನ ಸಾಮರ್ಥ್ಯ, ಸಾಗರ ಪರೀಕ್ಷೆಗಳ ಮಾಹಿತಿ ಹೊರ ಜಗತ್ತಿಗೆ ಅಪರಿಚಿತ. ಆದರೆ ಇದು ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಕನಸೊಂದು ನನಸಾದ ಸಾಧನೆ ಎನ್ನುವುದು ಮಾತ್ರ ನಿರ್ವಿವಾದ. ‘ಐಎನ್‌ಎಸ್ ಅರಿಹಂತ್’ ಸೇವೆಗೆ ನಿಯೋಜನೆಗೊಳ್ಳುವ ಮೂಲಕ ನಮ್ಮ ದೇಶಕ್ಕೆ ನೀರಿನಾಳದಿಂದಲೂ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯ ಬಂದಿದೆ. ಈ ಸಾಧನೆಯೊಂದಿಗೆ ಅಣ್ವಸ್ತ್ರ ಚಾಲಿತ ಸಬ್‌ಮರೀನ್ ವಿನ್ಯಾಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
ನಮ್ಮ ದೇಶ ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ವ್ರತ ಪಾಲಿಸುತ್ತಿದೆ. ಇಂಥ ದೇಶಗಳಿಗೆ ಸಮುದ್ರದಾಳದಿಂದ ಅಣ್ವಸ್ತ್ರ ಸಿಡಿತಲೆ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ಗಳನ್ನು ಹೊಂದುವುದು ಸೇನಾ ಕಾರ್ಯಪದ್ಧತಿ (ಮಿಲಿಟರಿ ಸ್ಟ್ರಾಟಜಿ) ದೃಷ್ಟಿಯಿಂದ ಅತ್ಯಗತ್ಯ. ಅರಿಹಂತ್‌ನಿಂದಾಗಿ ನೆಲದಿಂದ, ಬಾನಿನಿಂದ, ಸಮುದ್ರದ ಮೇಲಿನಿಂದ ಮತ್ತು ಸಾಗರದಾಳದಿಂದಲೂ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಸಿಕ್ಕಂತೆ ಆಗಿದೆ.
ಭಾರತೀಯ ನೌಕಾಪಡೆಗೆ ಇನ್ನೂ ಏನೆಲ್ಲಾ ಬೇಕಿದೆ?
ಸದ್ಯ ಭಾರತೀಯ ನೌಕಾಪಡೆಯ ಬಳಿ ಒಂದು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿರುವ ಒಂದುವಿಮಾನ ವಾಹಕ ನೌಕೆ (ವಿಕ್ರಮಾದಿತ್ಯ) ಇದೆ. ದೇಶೀಯ ವಿಮಾನ ವಾಹಕ ನೌಕೆ ‘ಐಎನ್‌ಎಸ್ ವಿಕ್ರಾಂತ್’ನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.2021ಕ್ಕೆ ಅದು ಸೇವೆಗೆ ಲಭ್ಯವಾಗುವ ನಿರೀಕ್ಷೆಗಳಿವೆ.
ನಮ್ಮ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ.
ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕು.
ಭಾರತೀಯ ನೌಕಾಪಡೆಯ ಬಳಿ ಈಗ ಏನೆಲ್ಲಾ ಇವೆ?
ಗ್ಲೋಬಲ್ ಫೈರ್ ಪವರ್ ಜಾಲತಾಣದ ಪ್ರಕಾರ ಭಾರತೀಯ ನೌಕಾಪಡೆಯ ಬಳಿ ಪ್ರಸ್ತುತ 1 ವಿಮಾನ ವಾಹಕ ನೌಕೆ, ಫ್ರಿಗೇಟ್ಸ್ (ವೇಗವಾಗಿ ಸಂಚರಿಸುವ ದಾಳಿ ನೌಕೆಗಳು) 13, ಡೆಸ್ಟ್ರಾಯರ್‌ಗಳು 11, ಕೊರ್ವೆಟ್ಸ್ (ಮಧ್ಯಮ ಗಾತ್ರದ ದಾಳಿ ನೌಕೆಗಳು)22, ಜಲಾಂತರ್ಗಾಮಿಗಳು (ಸಬ್‌ಮರೀನ್)16, ಗಸ್ತು ನೌಕೆಗಳು 139, ಮೈನ್ ನಾಶಕ ನೌಕೆ 1.
ಇದನ್ನೂ ಓದಿ:ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಶಿವಾಂಗಿ
(ಮಾಹಿತಿ ವಿವಿಧ ವೆಬ್‌ಸೈಟ್‌ಗಳು, ನಿರೂಪಣೆ: ಡಿ.ಎಂ.ಘನಶ್ಯಾಮ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.