ADVERTISEMENT

ಎಸ್‌ಸಿ, ಎಸ್‌ಟಿ ಉಪ ವರ್ಗೀಕರಣದ ಅಧಿಕಾರ: ಸುಪ್ರೀಂ ಕೋರ್ಟ್‌ ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 23:30 IST
Last Updated 6 ಫೆಬ್ರುವರಿ 2024, 23:30 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹೊಂದಿವೆಯೇ ಎಂಬ ಕಾನೂನಿನ ಪ್ರಶ್ನೆಯ ಬಗ್ಗೆ ಸುಪ್ರೀಂ ಕೋರ್ಟ್‌ ಪರಿಶೀಲನೆ ಆರಂಭಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ಏಳು ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಕಾನೂನು ಪ್ರಶ್ನೆಯ ಬಗ್ಗೆ ವಿಚಾರಣೆ ಶುರು ಮಾಡಿದೆ.

ADVERTISEMENT

‘ಪಂಜಾಬ್ ಪರಿಶಿಷ್ಟ ಜಾತಿಗಳ ಮತ್ತು ಹಿಂದುಳಿದ ವರ್ಗಗಳ (ಸೇವಾ ಮೀಸಲಾತಿ) ಕಾಯ್ದೆ 2006’ರ ಸಿಂಧುತ್ವವನ್ನು ಕೂಡ ಈ ಪೀಠವು ಪರಿಶೀಲನೆಗೆ ಒಳಪಡಿಸಲಿದೆ. ನೇರ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಕೋಟಾದಲ್ಲಿ ಶೇಕಡ 50ರಷ್ಟು ಸ್ಥಾನಗಳನ್ನು ಭರ್ತಿ ಮಾಡುವಾಗ ‘ವಾಲ್ಮೀಕಿ’ ಮತ್ತು ‘ಮಜಾಬಿ ಸಿಖ್’ ಸಮುದಾಯದವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಈ ಕಾಯ್ದೆಯು ಹೇಳುತ್ತದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಮಿಶ್ರಾ ಅವರು ಕೂಡ ಈ ಪೀಠದಲ್ಲಿ ಇದ್ದಾರೆ. ಈ ಪೀಠವು ಒಟ್ಟು 23 ಅರ್ಜಿಗಳ ವಿಚಾರಣೆ ನಡೆಸಲಿದೆ. 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಸಲ್ಲಿಸಿರುವ ಅರ್ಜಿಯೂ ಇವುಗಳಲ್ಲಿ ಸೇರಿದೆ.

ಪಂಜಾಬ್ ಸರ್ಕಾರ ರೂಪಿಸಿದ್ದ ಕಾಯ್ದೆಯ ಸೆಕ್ಷನ್‌ 4(5)ಅನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಇದು 2004ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಇ.ವಿ. ಚಿನ್ನಯ್ಯ ಮತ್ತು ಆಂಧ್ರಪ್ರದೇಶ ನಡುವಿನ ಪ್ರಕರಣದಲ್ಲಿ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು. ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣವು ಸಂವಿಧಾನದ 14ನೆಯ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ಹೇಳಲಾಗಿದೆ.

ಪರಿಶಿಷ್ಟ ಜಾತಿಗಳು ಎಂದು ಪರಿಗಣಿತವಾಗಿರುವ ಜಾತಿಗಳನ್ನು, ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆಯುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರವೇ ವಿನಾ ವಿಧಾನಸಭೆಗಳಿಗೆ ಇಲ್ಲ ಎಂದು 2004ರ ತೀರ್ಪಿನಲ್ಲಿ ಹೇಳಲಾಗಿದೆ.

2004ರ ತೀರ್ಪು ತನಗೆ ಅನ್ವಯಿಸುವುದಿಲ್ಲ ಎಂದು ಕೂಡ ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿತ್ತು. ಪಂಜಾಬ್ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ಚಿನ್ನಯ್ಯ ತೀರ್ಪಿನಲ್ಲಿ ಹೇಳಿದ್ದಕ್ಕೆ ಭಿನ್ನವಾದ ನಿಲುವು ತಾಳಿತು. ಇಡೀ ವಿಚಾರವನ್ನು ಏಳು ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಹೊಂದಿರುವ ವಿಸ್ತೃತವಾದ ನ್ಯಾಯಪೀಠವು ವಿಚಾರಣೆ ನಡೆಸಿ, ಇನ್ನಷ್ಟು ಅಧಿಕಾರಯುತವಾದ ತೀರ್ಪು ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.