ADVERTISEMENT

ಅತ್ಯಾಚಾರಗಳಿಗೆ ಕೊನೆ ಎಂದು?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 20:30 IST
Last Updated 20 ಮಾರ್ಚ್ 2020, 20:30 IST
   

ನಿರ್ಭಯಾ ಅತ್ಯಾಚಾರ ಪ್ರಕರಣವೇನೋ ತಾತ್ವಿಕ ಅಂತ್ಯ ಕಂಡಿದೆ. ಆದರೆ ಈ ಹೇಯ ಘಟನೆಯ ಬಳಿಕವೂ ಅತ್ಯಾಚಾರಗಳು ನಿಂತಿಲ್ಲ. ನಿರ್ಭಯಾ ಘಟನೆಯ ಬಳಿಕ ದೇಶದಲ್ಲಿ ಕಂಡ ಪ್ರಮುಖ ಕೃತ್ಯಗಳ ಮಾಹಿತಿ ಇಲ್ಲಿದೆ...

ಹೈದರಾಬಾದ್ ಎನ್‌ಕೌಂಟರ್‌: ಚರ್ಚೆಗೆ ಗ್ರಾಸವಾದ ‘ನ್ಯಾಯದಾನ’ ಮಾದರಿ

2019ರ ನವೆಂಬರ್‌ನಲ್ಲಿ ಹೈದರಾಬಾದ್‌ ಹೊರವಲಯದಲ್ಲಿ 26 ವರ್ಷದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ದೇಹವನ್ನು ಸುಟ್ಟುಹಾಕಿ ಕೊಂದಿದ್ದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು.ಪಶುವೈದ್ಯೆ ಅಂದು ರಾತ್ರಿ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಅವರ ವಾಹನ ಪಂಕ್ಚರ್ ಆಗಿತ್ತು. ಇದನ್ನು ಸಹೋದರಿಗೆ ಕರೆ ಮಾಡಿ ತಿಳಿಸಿದ್ದ ಸಂತ್ರಸ್ತೆ, ತಮಗೆ ಭಯವಾಗುತ್ತಿದೆ ಎಂದೂ ಹೇಳಿದ್ದರು. ಆದರೆ ಮರುದಿನ ಸಂಜೆ ಹೊತ್ತಿಗೆ ಅವರು ಶವವಾಗಿ ಪತ್ತೆಯಾಗಿದ್ದರು.

ADVERTISEMENT

ಆರೋಪಿಗಳಾದ ಮೊಹಮ್ಮದ್‌ ಆಲಿ, ಜೊಲ್ಲು ಶಿವ, ಜೊಲ್ಲು ನವೀನ್‌ ಕುಮಾರ್‌, ಚೆನ್ನಕೇಶವಲು ಎಂಬುವರನ್ನು ಪೊಲೀಸರು ಬಂಧಿಸಿದ್ದರು.ಮಹಜರು ನಡೆಸಲು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟರು. ಆರೋಪಿಗಳು ತಮ್ಮ ಮೇಲೆಯೇ ಹಲ್ಲೆ ಮಾಡಲು ಮುಂದಾದಾಗ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿಕೆ ನೀಡಿದರು. ಪೊಲೀಸರ ಈ ‘ನ್ಯಾಯ’ ದೇಶದಲ್ಲಿ ಪರ–ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು.ಎನ್‌ಕೌಂಟರ್ ಪ್ರಕರಣದ ತನಿಖೆಗೆ ಆಯೋಗವನ್ನು ರಚಿಸಲಾಗಿದೆ.

ಉನ್ನಾವ್: ಶಾಸಕನೇ ಅತ್ಯಾಚಾರಿ!

ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸ್ವತಃ ಅತ್ಯಾಚಾರಿ.2017ರಲ್ಲಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಸೆಂಗರ್‌ಗೆ ಕೋರ್ಟ್‌ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಸೆಂಗರ್ ಹಾಗೂ ಸಂಬಂಧಿಕರು ಸಂತ್ರಸ್ತೆಯ ತಂದೆ ಮೇಲೆ ಠಾಣೆಯಲ್ಲಿ ತೀವ್ರ ಹಲ್ಲೆ ಮಾಡಿದ್ದರು. ಗಾಯಗೊಂಡ ಅವರು ಮೃತಪಟ್ಟರು. ಅಪಘಾತದಲ್ಲಿ ಸಂತ್ರಸ್ತೆಯನ್ನು ಸಾಯಿಸುವ ಯತ್ನ ನಡೆದಿತ್ತು. ಆಕೆ ಬಚಾವಾದಳು. ಆದರೆ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು.ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರಿಂದ ದೆಹಲಿಗೆ ವರ್ಗಾಯಿಸಲಾಗಿತ್ತು.ಸಾಮೂಹಿಕ ಅತ್ಯಾಚಾರ, ಅಪಘಾತದಲ್ಲಿ ಸಾಯಿಸಲು ಯತ್ನ, ಸಂತ್ರಸ್ತೆಯ ತಂದೆ ಠಾಣೆಯಲ್ಲಿ ಮೃತಪಟ್ಟ ಘಟನೆಗಳು ಸೇರಿಒಟ್ಟು ಐದು ಪ್ರಕರಣಗಳು ಸೆಂಗರ್ ವಿರುದ್ಧ ದಾಖಲಾಗಿದ್ದವು

ಕಿಚ್ಚಿಗೆ ಬಲಿಯಾದ ಸಂತ್ರಸ್ತೆ

2018ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮಾಹಿಕ ಅತ್ಯಾಚಾರ ನಡೆದಿತ್ತು. ಶಿವರಾಂ ತ್ರಿವೇದಿ ಮತ್ತು ಶುಭಂ ತ್ರಿವೇದಿ ಎಂಬ ಆರೋಪಿಗಳು ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು.ಸಂತ್ರಸ್ತೆಯು ವಿಚಾರಣೆಗಾಗಿ ರಾಯಬರೇಲಿ ನ್ಯಾಯಾಲಯಕ್ಕೆ ಹೊರಟಿದ್ದಾಗ ಅಡ್ಡಗಟ್ಟಿದ ಐವರು ದುಷ್ಕರ್ಮಿಗಳು ಆಕೆಯ ಮೇಲೆ ಪೆಟ್ರೊಲ್‌ ಸುರಿದು ಬೆಂಕಿ ಹಚ್ಚಿದ್ದರು.ಬೆಂಕಿಯಲ್ಲಿ ನರಳುತ್ತಲೇ ಸಹಾಯಕ್ಕಾಗಿ ಅಂಗಲಾಚಿ ಸುಮಾರು ಒಂದು ಕಿಲೋಮೀಟರ್ ಓಡಿದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.

‘ನನ್ನನ್ನು ಬದುಕಿಸಿ. ಆರೋಪಿಗಳು ಗಲ್ಲಿಗೇರುವುದನ್ನು ನೋಡಬೇಕು’ ಎಂದುಶೇ 90ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದ ಸಂತ್ರಸ್ತೆ ಹೇಳಿದ್ದೇ ಕೊನೆಯ ಮಾತು.ಮೊದಲಿಗೆ ಲಖನೌದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಸಂಜೆ ಹೊತ್ತಿಗೆ ಏರ್‌ ಆಂಬುಲೆನ್ಸ್‌ ಮೂಲಕ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 48 ಗಂಟೆಗಳ ಜೀವನ್ಮರಣ ಹೋರಾಟದ ನಂತರ ಹೃದಯಾಘಾತದಿಂದ ಸಂತ್ರಸ್ತೆ ಕೊನೆಯುಸಿರೆಳೆದರು.

ಕಠುವಾ ಅತ್ಯಾಚಾರ ಪ್ರಕರಣ

ಕಳೆದ ವರ್ಷ‌ದ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಮುಸ್ಲಿಂ ಅಲೆಮಾರಿ ಜನಾಂಗಕ್ಕೆ ಸೇರಿದ 8 ವರ್ಷದ ಬಾಲಕಿಯನ್ನು ಕೇವಲ ಧಾರ್ಮಿಕ ಕಾರಣಗಳಿಗಾಗಿ ಆರೋಪಿಗಳು ಅಪಹರಿಸಿ, ಅಜ್ಞಾತ ಸ್ಥಳದಲ್ಲಿರಿಸಿಕೊಂಡು ನಿರಂತರ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಾಲಕಿಗೆ ಚಿತ್ರ ಹಿಂಸೆ ನೀಡಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದರು.

ದೇಶದಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗುತ್ತಲೇ ಪ್ರಕರಣವನ್ನು ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಸಂಜಿ ರಾಮ್‌ ಎಂಬ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಮಾರ್ಚ್‌ 20ರಂದು ತಾನಾಗಿಯೇ ಶರಣಾಗಿದ್ದ. ಈತನ ಮಗ ವಿಶಾಲ್‌, ಒಬ್ಬ ಬಾಲಕ, ಸ್ನೇಹಿತ ಆನಂದ್‌ ದತ್ತಾ ಮತ್ತು ಪೊಲೀಸ್‌ ಸಿಬ್ಬಂದಿಗಳಾದ ದೀಪಕ್‌ ಖಜಾರಿಯಾ, ಸುರೇಂದ್ರ ವರ್ಮಾ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಸಲಾಯಿತು. ಮುಸ್ಲಿಂ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮುಜಫ್ಫರ್‌‍ಪುರ ಪುನರ್ವಸತಿ ಕೇಂದ್ರದ ಪ್ರಕರಣ

ಬಿಹಾರದ ಮುಜಫ್ಫರ್‌ಪುರದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಏಳು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯು 2018ರ ಮೇ 26ರಂದು ಸರ್ಕಾರಕ್ಕೆ ಸಲ್ಲಿಸಲಾದ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಬಿಹಾರದ ಪೀಪಲ್ಸ್ ಪಕ್ಷದ ಶಾಸಕ ಬ್ರಜೇಶ್ ಠಾಕೂರ್ ಪ್ರಮುಖ ಆರೋಪಿ.

ಜೆಡಿಯು ನಾಯಕಿ, ಬಿಹಾರದ ಸಚಿವೆಯಾಗಿದ್ದ ಮಂಜು ವರ್ಮಾ ಅವರ ಪತಿಯು ಠಾಕೂರ್ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಹೀಗಾಗಿ ಮಂಜು ವರ್ಮಾ ರಾಜೀನಾಮೆ ನೀಡಿದ್ದರು. ಇವರೂ ಸೇರಿದಂತೆ 11 ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.ಪುನರ್ವಸತಿ ಕೇಂದ್ರದ ಎಲ್ಲ ಬಾಲಕಿಯರನ್ನು ಸುರಕ್ಷಿತ ಕೇಂದ್ರಗಳಿಗೆ ಸರ್ಕಾರ ವರ್ಗಾಯಿಸಿತ್ತು. ಮುಜಫ್ಫರ್‌ಪುರದ ಸ್ಥಳೀಯ ಕೋರ್ಟ್‌ನಲ್ಲಿದ್ದ ಪ್ರಕರಣವನ್ನು ದೆಹಲಿಯ ಸಾಕೇತ್ ಜಿಲ್ಲಾ ಕೋರ್ಟ್‌ ಆವರಣದ ಪೋಕ್ಸೊ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.