ನವದೆಹಲಿ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಡೆದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್ ಅಣ್ಣಾ ಶಿಂದೆಯನ್ನು ಪೊಲೀಸರ ಎನ್‌ಕೌಂಟರ್ ಮಾಡಿರುವ ಸಂಬಂಧ ‘ಇಂಡಿಯಾ’ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಜೋರಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯ ಸಾವಿಗೆ ಸಂತಾಪ ವ್ಯಕ್ತಪಡಿಸಿರುವುದು ಮತ್ತು ಪೊಲೀಸ್ ಅಧಿಕಾರಿಗಳು ‘ಪ್ರತಿಕಾರದ ಗುಂಡಿನ ದಾಳಿ’ ನಡೆಸಿದ್ದಾರೆ ಎಂದು ಆರೋಪಿಸಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರ ವಿರುದ್ಧ (ಶಿವಸೇನಾ) ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ವಾಗ್ದಾಳಿ ನಡೆಸಿದ್ದಾರೆ.
ಅಕ್ಷಯ್ ಶಿಂದೆ ಸಾವಿನಿಂದಾಗಿ ಒಂದು ಕಡೆ ಮಹಾರಾಷ್ಟ್ರ ಮತ್ತು ಬದ್ಲಾಪುರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಮತ್ತೊಂದೆಡೆ ಅತ್ಯಾಚಾರಿಯ ಸಾವಿನ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಶೋಕ ವ್ಯಕ್ತಪಡಿಸುತ್ತಿವೆ. ಇದೇನಾ ‘ಅತ್ಯಾಚಾರಿ ಬಚಾವೋ ಮೈತ್ರಿ’ ಎಂದು ಪೂನವಾಲಾ ಪ್ರಶ್ನಿಸಿದ್ದಾರೆ.
‘ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದಾಗಲೂ ಮತ್ತು ಅಯೋಧ್ಯೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಮೊಯೀದ್ ಖಾನ್‌ನನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟದ ಕೆಲವು ನಾಯಕರು ಅತ್ಯಾಚಾರಿಗಳ ಪರವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ’ ಎಂದು ಪೂನವಾಲಾ ಗುಡುಗಿದ್ದಾರೆ.
‘ಇದು ಸಾಕ್ಷ್ಯವನ್ನು ನಾಶಪಡಿಸುವ ಪ್ರಯತ್ನವೇ? ಆರೋಪಿ ಅಕ್ಷಯ್‌ನನ್ನು ಕರೆದೊಯ್ಯುವಾಗ ಆತನ ಕೈಗಳಿಗೆ ಕೋಳ ಹಾಕಿರಲಿಲ್ಲವೇ? ಆತ ಇನ್‌ಸ್ಪೆಕ್ಟರ್ ಬಳಿ ಇದ್ದ ಪಿಸ್ತೂಲ್ ಕಸಿದುಕೊಳ್ಳಲು ಹೇಗೆ ಸಾಧ್ಯ?, ಪ್ರಕರಣದ ಬಗ್ಗೆ ಪೊಲೀಸರು ಅಸಡ್ಡೆ ಎದ್ದು ಕಾಣುತ್ತಿದೆ. ಹಾಗಾಗಿ ನಾವು ಈ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸುತ್ತೇವೆ’ ಎಂದು ನಾಯಕ ವಿಧಾನಸಭೆ ವಿಪಕ್ಷ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದರು.
ಬಂಧಿತ ಆರೋಪಿಯನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ. ಹಾಗಾಗಿ ನಮಗೆ ಬದ್ಲಾಪುರ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ವಾಡೆತ್ತಿವಾರ್ ಹೇಳಿದ್ದರು.
ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಒತ್ತಾಯಿಸಿದ್ದರು.
ಆಗಿದ್ದೇನು?
ಬದ್ಲಾಪುರದಲ್ಲಿ ನಡೆದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್ ಅಣ್ಣಾ ಶಿಂದೆ ಸೋಮವಾರ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಎರಡನೇ ಪತ್ನಿ ಸಲ್ಲಿಸಿದ್ದ ಅಸ್ವಾಭಾವಿಕ ಲೈಂಗಿಕತೆ ಕುರಿತ ಪ್ರಕರಣದ ತನಿಖೆಗಾಗಿ ಅಕ್ಷಯ್ ಶಿಂದೆಯನ್ನು ತಲೋಜಾ ಕಾರಾಗೃಹದಿಂದ ಬದ್ಲಾಪುರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮುಂಬ್ರಾ ಬೈಪಾಸ್ ಸಮೀಪ ಪೊಲೀಸ್ ವ್ಯಾನ್ ಒಳಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ, ವ್ಯಾನ್‌ನಲ್ಲಿ ಕುಳಿತಿದ್ದ ಅಕ್ಷಯ್ ಶಿಂದೆ, ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ನೀಲೇಶ್ ಮೋರೆ ಅವರ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡು ಮೂರು ಸುತ್ತು ಗುಂಡು ಹಾರಿಸಿದ. ಮೋರೆ ಅವರಿಗೂ ಗುಂಡೇಟು ತಗುಲಿತು. ಈ ಸಂದರ್ಭದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಅಕ್ಷಯ್ ತೀವ್ರ ಗಾಯಗೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಆರೋಪಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶಾಲೆಯ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ ಅಕ್ಷಯ್, ನರ್ಸರಿಯ ಇಬ್ಬರು ಬಾಲಕಿಯರ ಮೇಲೆ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಪ್ರಕರಣವು ಮಹಾರಾಷ್ಟ್ರದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.