ಕೊಯಮತ್ತೂರು: ಮದುವೆ ಅಥವಾ ಸನ್ಯಾಸತ್ವ ಎಂಬುದು ವಯಸ್ಕರ ವೈಯಕ್ತಿಕ ಆಯ್ಕೆ. ಮದುವೆಯಾಗುವಂತೆ ಅಥವಾ ಸನ್ಯಾಸತ್ವ ದೀಕ್ಷೆ ತೆಗೆದುಕೊಳ್ಳುವಂತೆ ನಾವು ಹೇಳುವುದಿಲ್ಲ ಎಂದು ಇಶಾ ಫೌಂಡೇಷನ್ ಸ್ಪಷ್ಟಪಡಿಸಿದೆ.
‘ಇಶಾ ಫೌಂಡೇಷನ್’ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಕುರಿತ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದ ನಂತರ ತಮಿಳುನಾಡು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಫೌಂಡೇಷನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸಲು ಸದ್ಗುರು ಜಗ್ಗಿ ವಾಸುದೇವ ಅವರು ‘ಇಶಾ ಫೌಂಡೇಷನ್’ ಸ್ಥಾಪಿಸಿದ್ದಾರೆ. ಪ್ರಸ್ತುತ ಇಶಾ ಯೋಗ ಕೇಂದ್ರವು ಸನ್ಯಾಸಿಗಳಲ್ಲದ ಸಾವಿರಾರು ಜನರಿಗೆ ಮತ್ತು ಬ್ರಹ್ಮಚರ್ಯ ಪಡೆದ ಕೆಲವರಿಗೆ ನೆಲೆಯಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
‘ಫೌಂಡೇಷನ್ ವಿರುದ್ಧ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸನ್ಯಾಸತ್ವ ಸ್ವೀಕರಿಸಿದವರು ಕೋರ್ಟ್ ಎದುರು ಹಾಜರಾಗಿ, ‘ಸ್ವಇಚ್ಛೆಯಿಂದ ಇಶಾ ಯೋಗ ಕೇಂದ್ರದಲ್ಲಿ ನೆಲೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದಲ್ಲಿ ಸತ್ಯವು ಮೇಲುಗೈ ಸಾಧಿಸುತ್ತದೆ ಮತ್ತು ಅನಗತ್ಯ ವಿವಾದಗಳು ಅಂತ್ಯ ಕಾಣಲಿವೆ‘ ಎಂದು ಭಾವಿಸಿರುವುದಾಗಿ ಹೇಳಿದೆ.
‘ಈ ಹಿಂದೆ, ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ನಿರ್ಮಿಸುತ್ತಿರುವ ಚಿತಾಗಾರದ ಸುತ್ತಲಿನ ಸಂಗತಿಗಳ ಬಗ್ಗೆ ತನಿಖೆ ನಡೆಸಲು ಸತ್ಯಶೋಧನಾ ಸಮಿತಿಯ ನೆಪದಲ್ಲಿ ಫೌಂಡೇಶನ್ ಆವರಣ ಪ್ರವೇಶಿಸಲು ಪ್ರಯತ್ನಿಸಿದ್ದರು. ನಂತರ ಇಶಾ ಯೋಗ ಕೇಂದ್ರದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದರು. ಇದರ ವಿರುದ್ಧ ಪೊಲೀಸರು ಅಂತಿಮ ವರದಿ ಸಲ್ಲಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಇದರ ಹೊರತಾಗಿ ಫೌಂಡೇಷನ್ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಫೌಂಡೇಷನ್ ವಿರುದ್ಧ ಸುಳ್ಳು ಮಾಹಿತಿ ಹರಡುವುದು ಕಂಡುಬಂದಲ್ಲಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅದು ಎಚ್ಚರಿಸಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ. ಇಲ್ಲಿನ ನಿವಾಸಿಗಳು, ಸ್ವಯಂ ಸೇವಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.