ಅಹಮದಾಬಾದ್: ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರಾ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನಿರಾಕರಿಸಿರುವ ಗುಜರಾತ್ ಸರ್ಕಾರ, ಮುಂಬೈನ ಕಾಲೇಜು ವಿದ್ಯಾರ್ಥಿ ಇಶ್ರತ್ ಜಹಾನ್ ಲಷ್ಕರ್–ಎ– ತಯಬಾ ಸಂಘಟನೆ ಸದಸ್ಯೆ ಎಂದು ಪ್ರತಿಪಾದಿಸಿದೆ.
ಈ ಬಗ್ಗೆ ಗುಜರಾತ್ ಸರ್ಕಾರ ಸಿಬಿಐಗೆ ಪತ್ರ ಬರೆದಿದೆ. ಈ ಪತ್ರವನ್ನು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಮಂಗಳವಾರ ಸಿಬಿಐ ಹಾಜರುಪಡಿಸಿದೆ. ಈ ಪತ್ರವು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ ಇಶ್ರತ್ ಜಹಾನ್ ಯಾವುದೇ ಉಗ್ರಗಾಮಿ ಸಂಘಟನೆ ಜತೆ ನೇರ ಸಂಪರ್ಕ ಹೊಂದಿಲ್ಲ. ಆದರೆ, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಇನ್ನೊಬ್ಬ ಪುರುಷ ವ್ಯಕ್ತಿಯ ಬಗ್ಗೆ ಗೊತ್ತಿತ್ತು ಎನ್ನುವುದನ್ನು ತಳ್ಳಿಹಾಕುವಂತಿಲ್ಲ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
‘ಮೂರನೇ ಪುರುಷ ವ್ಯಕ್ತಿಯು ಉಗ್ರ ಅಲ್ಲ ಎನ್ನುವ ಸಾಧ್ಯತೆಯನ್ನು ಸಹ ನಿರಾಕರಿಸಲಾಗುವುದಿಲ್ಲ’ ಎಂದು ಪ್ರಸ್ತಾಪಿಸಲಾಗಿದೆ. ಈ ಮೂರನೇ ವ್ಯಕ್ತಿಯು ಇಶ್ರತ್ ಸ್ನೇಹಿತ ಪ್ರಾಣೇಶ್ ಪಿಳ್ಳೈ ಅಲಿಯಾಸ್ ಜಾವೇದ್ ಶೇಖ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2004ರ ಜೂನ್‌ನಲ್ಲಿ ಅಹಮದಾಬಾದ್ ಹೊರವಲಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಶ್ರತ್ ಜಹಾನ್ ಮತ್ತು ಜಾವೇದ್ ಶೇಖ್ ಜತೆಗೆ ಪಾಕಿಸ್ತಾನದವರೆನ್ನಲಾದ ಝೀಶನ್ ಜೋಹರ್ ಮತ್ತು ಅಮ್ಜದ್ ಅಲಿ ರಾಣಾ ಅವರನ್ನು ಹತ್ಯೆ ಮಾಡಲಾಗಿತ್ತು. ಇವರನ್ನು ಲಷ್ಕರ್–ಎ–ತಯಬಾ ಸಂಘಟನೆಗೆ ಸೇರಿದವರು ಎಂದು ಪೊಲೀಸರು ಪ್ರತಿಪಾದಿಸಿದ್ದರು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಇವರು ಸಂಚು ರೂಪಿಸಿದ್ದರು ಎಂದು ಹೇಳಿದ್ದರು.ಗುಜರಾತ್ ಹೈಕೋರ್ಟ್ ಮುಂದೆ ಈ ಪ್ರಕರಣದ ವಿಚಾರಣೆ ನಡೆದಾಗ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಆದೇಶಿಸಿತು. ಎನ್‌ಕೌಂಟರ್ ನಕಲಿಯೋ ಅಥವಾ ಅಸಲಿಯೋ ಎನ್ನುವುದು ಸ್ಪಷ್ಟವಾಗಬೇಕು ಎಂದು ನ್ಯಾಯಾಲಯ ಸೂಚಿಸಿತು.
ತನಿಖೆ ನಡೆಸಿದ ಸಿಬಿಐ, ಎನ್‌ಕೌಂಟ ರ್‌ನಲ್ಲಿ ಹತ್ಯೆಗೀಡಾಗುವ ಮುನ್ನ ನಾಲ್ವರು ಗುಜರಾತ್ ಪೊಲೀಸ್ ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳ ವಶದಲ್ಲಿದ್ದರು ಎನ್ನುವುದನ್ನು ದೃಢಪಡಿಸಿತ್ತು. ಬಳಿಕ, ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ನಾಲ್ವರನ್ನು ಪೂರ್ವನಿಯೋಜಿತ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಯಿತು ಎಂದು ಉಲ್ಲೇಖಿಸಲಾಗಿತ್ತು. ಆದರೆ, ಈಗ ರಾಜ್ಯ ಗೃಹ ಇಲಾಖೆ ಸಲ್ಲಿಸಿರುವ ಪತ್ರದಲ್ಲಿ ವ್ಯತಿರಿಕ್ತ ಅಭಿಪ್ರಾಯ ನೀಡಲಾಗಿದೆ ‘ಸಿಬಿಐ ಸಲ್ಲಿಸಿದ ದಾಖಲೆಗಳ ಅನ್ವಯ ಇಶ್ರತ್ ಜಹಾನ್ ಲಷ್ಕರ್–ಎ–ತಯಬಾ ಸಂಘಟನೆ ಸದಸ್ಯೆ. ಅವಳು ಲಷ್ಕರ್–ಎ–ತಯಬಾ ಸಂಘಟನೆಯ ಮಹಿಳಾ ಕಾರ್ಯಕರ್ತೆ ಎಂದು ಲಾಹೋರ್ ಮೂಲದ ಲಷ್ಕರ್–ಎ–ತಯಬಾ ಸಂಘಟನೆ ಮುಖವಾಣಿ ಘಝ್ವಾ ಟೈಮ್ಸ್ ಸಹ ಹೇಳಿತ್ತು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್ ಸರ್ಕಾರದಿಂದ ‘ಕ್ಲೀನ್‌ಚಿಟ್’
ವಂಜಾರಾ ವಿರುದ್ಧ ದುರುದ್ದೇಶಪೂರಿತ ಮೊಕದ್ದಮೆ ದಾಖಲಿಸುವುದನ್ನು ತಡೆಯಬೇಕು. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅವರನ್ನು ರಕ್ಷಿಸುವುದು ಅಗತ್ಯವಿದೆ ಎಂದು ಗುಜರಾತ್ ಸರ್ಕಾರ ಪ್ರತಿಪಾದಿಸಿದೆ.
ಅಪರಾಧ ನಡೆದ ಸ್ಥಳದಲ್ಲಿ ಇರಲಿಲ್ಲ ಎನ್ನುವ ಆಧಾರದ ಮೇಲೆ ವಂಜಾರಾ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.