ಮುಂಬೈ: ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳಗಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನ(ಐಎಸ್‌ಐ) ಶಂಕಿತ ಏಜೆಂಟ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ ಎಟಿಎಸ್‌ನ ಜುಹು ಘಟಕವು ಉತ್ತರ ಪ್ರದೇಶದ ಎಟಿಎಸ್ ತಂಡದೊಂದಿಗೆ ಇಲ್ಲಿನ ಉಪನಗರ ಜೋಗೇಶ್ವರಿಯಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ ಎಂದು ಅವರು ಹೇಳಿದರು.
ಆರೋಪಿಗಳನ್ನು ಅರ್ಮಾನ್ ಸಯ್ಯದ್ (62) ಮತ್ತು ಮೊಹಮ್ಮದ್ ಸಲ್ಮಾನ್ ಸಿದ್ಧಿಕಿ (24) ಎಂದು ಗುರುತಿಸಲಾಗಿದೆ. ಶಂಕಿತ ಐಎಸ್‌ಐ ಏಜೆಂಟ್ ಸಯ್ಯದ್, ಮೊಹಮ್ಮದ್ ಸಲ್ಮಾನ್ ಅವರನ್ನು ನೇಮಕ ಮಾಡಿಕೊಂಡಿದ್ದನು ಈ ಇಬ್ಬರೂ ಶಂಕಿತ ಐಎಸ್‌ಐ ಏಜೆಂಟ್ ಮೊಹಮದ್ ರಯೀಸ್‌ಗೆ ಸಹಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗೊಂಡಾ ಮೂಲದ ರಯೀಸ್, ಪಾಕಿಸ್ತಾನದಲ್ಲಿರುವ ತನ್ನ ಐಎಸ್‌ಐ ಅಧಿಕಾರಿಗಳಿಗೆ ಭಾರತೀಯ ಮಿಲಿಟರಿ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಎಟಿಎಸ್ ಬಂಧಿಸಿತ್ತು.
ಆತನ ಬಂಧನದ ನಂತರ ಜೋಗೇಶ್ವರಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಸಯ್ಯದ್ ಮತ್ತು ಸಿದ್ಧಿಕಿ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.