ADVERTISEMENT

ಅನಂತನಾಗ್: ಪೊಲೀಸ್ ಎಎಸ್‌ಐ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ

ಪಿಟಿಐ
Published 26 ಡಿಸೆಂಬರ್ 2021, 8:03 IST
Last Updated 26 ಡಿಸೆಂಬರ್ 2021, 8:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪೊಲೀಸ್‌ ಅಧಿಕಾರಿಯೊಬ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಸ್ಲಾಮಿಕ್‌ ಸ್ಟೇಟ್‌ ಜಮ್ಮು ಮತ್ತು ಕಾಶ್ಮೀರದ (ಐಎಸ್‌ಜೆಕೆ) ಉಗ್ರಗಾಮಿಯು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ಶನಿವಾರ ತಡ ರಾತ್ರಿಯಿಂದ ಎನ್‌ಕೌಂಟರ್‌ ಆರಂಭವಾಗಿತ್ತು. ಇದೂ ಸೇರಿ ಕಾಶ್ಮೀರದಲ್ಲಿ ಶನಿವಾರ ಬೆಳಿಗ್ಗೆಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮೂರು ಬಾರಿ ಗುಂಡಿನ ಚಕಮಕಿ ನಡೆದಿದೆ. ಮೂರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು ಐವರು ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ.

ಉಗ್ರರ ಇರುವಿಕೆಯ ಸುಳಿವು ಸಿಗುತ್ತಿದ್ದಂತೆ ಭದ್ರತಾ ಪಡೆಗಳು ಶನಿವಾರ ರಾತ್ರಿಯಿಂದ ಕೆ ಕಲಾನ್‌, ಶ್ರೀಗುಫವಾರಾ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ADVERTISEMENT

ಹತನಾಗಿರುವ ಉಗ್ರನನ್ನು ಫಹೀಮ್‌ ಭಟ್‌ ಎಂದು ಗುರುತಿಸಲಾಗಿದೆ. 'ಆತ ಇತ್ತೀಚೆಗಷ್ಟೇ ಐಎಸ್‌ಜೆಕೆ ಉಗ್ರ ಸಂಘಟನೆಗೆ ಸೇರಿದ್ದ ಹಾಗೂ ಪೊಲೀಸ್‌ ಎಎಸ್ಐ ಅಶ್ರಫ್‌ ಹತ್ಯೆಯಲ್ಲಿ ಭಾಗಿಯಾಗಿದ್ದ' ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಟ್ವೀಟಿಸಿದ್ದಾರೆ.

ಬುಧವಾರ ಸಂಜೆ ಬಿಜಬಿಹಾರ ಆಸ್ಪತ್ರೆಯ ಹೊರಭಾಗದಲ್ಲಿ ಎಎಸ್‌ಐ ಅಶ್ರಫ್‌ ಅವರ ಮೇಲೆ ಉಗ್ರರರು ಗುಂಡಿನ ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.