ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಯ ಹಿನ್ನಲೆಯಲ್ಲಿ ಪೊಲೀಸರು ಗುರುವಾರ ಅಲ್ಪಸಂಖ್ಯಾತ ಸಮುದಾಯದವರ ಪೂಜಾ ಸ್ಥಳಗಳು ಮತ್ತು ಸಮುದಾಯಗಳ ರಕ್ಷಣೆಗೆ 70 ಸದಸ್ಯರ ವಿಶೇಷ ಘಟಕ ರಚಿಸಿದ್ದಾರೆ.
ಅಲ್ಪಸಂಖ್ಯಾತ ರಕ್ಷಣಾ ಘಟಕಕ್ಕೆ 70 ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲಾ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಪ್ರದೇಶಗಳಲ್ಲಿನ ಅಲ್ಪಸಂಖ್ಯಾತರ ಪೂಜಾ ಸ್ಥಳಗಳು ಮತ್ತು ಸಮುದಾಯಗಳ ರಕ್ಷಣೆಗೆ ಜವಾಬ್ದಾರರಾಗಿರುತ್ತಾರೆ ಎಂದು ಇಸ್ಲಾಮಾಬಾದ್ ಪೊಲೀಸರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಶಿಫಾರಸು ಪ್ರಕಾರ ಸ್ಥಾಪಿಸಲಾದ ಈ ಘಟಕವು ಎಸ್‌ಎಸ್‌ಪಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತದೆ.
ಲಾಹೋರ್ ವರದಿ: ಹಿಂಸಾಚಾರದಲ್ಲಿ ಹಾನಿಗೊಳಗಾದ ಕ್ರೈಸ್ತರ ಮನೆಗಳು ಮತ್ತು ಚರ್ಚ್‌ಗಳನ್ನು 3–4 ದಿನಗಳಲ್ಲಿ ದುರಸ್ತಿಪಡಿಸಲಾಗುವುದು ಎಂದು ಪಂಜಾಬ್ ಪ್ರಾಂತ್ಯದ ಹಂಗಾಮಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಭರವಸೆ ನೀಡಿದ್ದಾರೆ.
ಕ್ರೈಸ್ತ ಸಮುದಾಯದ ಧಾರ್ಮಿಕ ಮುಖಂಡರು ಭಾಗವಹಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದ ನಖ್ವಿ, ಇಂತಹ ಘಟನೆಗಳು ಇಸ್ಲಾಂ ಮತ್ತು ಪ್ರವಾದಿಯ ಬೋಧನೆಗಳಿಗೆ ವಿರುದ್ಧವಾಗಿವೆ ಎಂದಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.