ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಭಾನುವಾರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾಗಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಭೆಗೆ ಪ್ರಧಾನಿ ಗೈರುಹಾಜರಾಗಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಪ್ರಶ್ನೆ ಮಾಡಿದ್ದಾರೆ.
‘ಮುಂಬರುವ ಸಂಸತ್ತಿನ ಅಧಿವೇಶನದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಪ್ರಾರಂಭವಾಗಿದೆ. ಎಂದಿನಂತೆ ಪ್ರಧಾನಿ ಗೈರುಹಾಜರಾಗಿದ್ದಾರೆ’ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
‘ಇದು ಅಸಂಸದೀಯ ಅಲ್ಲವೇ?’ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಸಂಸತ್‌ನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆ ಭಾನುವಾರ ದೆಹಲಿಯಲ್ಲಿ ಆರಂಭವಾಯಿತು.
ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯ ಬಿಜೆಪಿಯ ನಾಯಕ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ಸಚಿವರು ಸರ್ಕಾರವನ್ನು ಪ್ರತಿನಿಧಿಸಿದರು.
ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಜೈರಾಮ್ ರಮೇಶ್, ಡಿಎಂಕೆಯ ಟಿಆರ್ ಬಾಲು ಮತ್ತು ತಿರುಚಿ ಶಿವ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಎನ್‌ಸಿಪಿಯ ಶರದ್ ಪವಾರ್ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಿಜೆಡಿಯ ಪಿನಾಕಿ ಮಿಶ್ರಾ, ವೈಎಸ್‌ಆರ್‌ಸಿಪಿಯ ವಿಜಯಸಾಯಿ ರೆಡ್ಡಿ ಮತ್ತು ಮಿಥುನ್ ರೆಡ್ಡಿ, ಟಿಆರ್‌ಎಸ್‌ನ ಕೇಶವ ರಾವ್ ಮತ್ತು ನಾಮ ನಾಗೇಶ್ವರ್ ರಾವ್, ಆರ್‌ಜೆಡಿಯ ಎಡಿ ಸಿಂಗ್ ಮತ್ತು ಶಿವಸೇನೆಯ ಸಂಜಯ್ ರಾವುತ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಆದರೆ, ಮಹತ್ವದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗಿದ್ದರು.
ಅಧಿವೇಶನ ಆರಂಭಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಒಮ್ಮತ ಮೂಡಿಸುವುದು ವಾಡಿಕೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಂದು ಆರಂಭವಾಗಲಿದ್ದು, ಆಗಸ್ಟ್ 12 ರಂದು ಮುಕ್ತಾಯವಾಗಲಿದೆ.
ಸಂಸತ್ ಅಧಿವೇಶನಕ್ಕೂ ಮುನ್ನ ಸುತ್ತೋಲೆಯೊಂದನ್ನು ಹೊರಡಿಸಿರುವ ಸರ್ಕಾರ, ಕೆಲ ಅಸಂಸದೀಯ ಪದಗಳನ್ನು ಬಳಸದಂತೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.