ತಿರುಪತಿ (ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಹವಾಮಾನ ಮುನ್ಸೂಚನೆ ನೀಡುವ ಇನ್‌ಸ್ಯಾಟ್– 3ಡಿಎಸ್ (INSAT-3DS) ಉಪಗ್ರಹ ಉಡಾವಣೆಗೂ ಮುನ್ನ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಶನಿವಾರ ನೆಲ್ಲೂರು ಜಿಲ್ಲೆಯ ಚೆಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮಿಷನ್ ಯಶಸ್ವಿಯಾಗಲು ಚೆಂಗಾಲಮ್ಮ ದೇವಿಯ ಆಶೀರ್ವಾದ ಪಡೆಯಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ' ಎಂದು ತಿಳಿಸಿದರು.
ರಾಕೆಟ್ ಉಡಾವಣೆಗೂ ಮುನ್ನ ಇಸ್ರೊ ಅಧಿಕಾರಿಗಳು ಈ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಈ ಸಂಪ್ರದಾಯ ಕಳೆದ 15 ವರ್ಷಗಳಿಂದಲೂ ರೂಢಿಯಲ್ಲಿದೆ. ಚಂದ್ರಯಾನ -3 ಮತ್ತು ಆದಿತ್ಯ-L1 ಮಿಷನ್ ಉಡಾವಣೆ ಮುನ್ನಾದಿನದಂದು ಸೋಮನಾಥ್ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಕೇಂದ್ರದಲ್ಲಿ ಇಂದು ಸಂಜೆ 5.35ಕ್ಕೆ ಇನ್ಸಾಟ್-3DS ಉಪಗ್ರಹವನ್ನು ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ.
ಈ ಉಪಗ್ರಹ ಹವಾಮಾನ ಮುನ್ಸೂಚನೆ ಸೇರಿದಂತೆ ಭಾರತದ ಹವಾಮಾನ ಮೇಲ್ವಿಚಾರಣಾ ಸೇವೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇಸ್ರೊ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.